Tuesday, December 31, 2013

ನಾ ನೀನಲ್ಲ


ಅಪ್ಪನಂತೆ ತೀರ ಹತ್ತಿರಕ್ಕೆ ಎಳಕೊಂಡು
ಮುದ್ದು ಮಾಡಿ, ಜೋಪಾನ ಮಾಡುವ ಹುಡುಗ
ಇದ್ದಕಿದ್ದಂತೆ, ತೀರಾ ಗಂಭೀರನಾಗುತ್ತಾನೆ.
ಅಪ್ಪನ ಹೊಣೆ ತನ್ನ ಮೇಲಿದೆಯೋ ಎಂಬಂತೆ
ಪರಕಾಯ ಪ್ರವೇಶ ಮಾಡಿದವನ ರೀತಿಯಲ್ಲಿ
ಗಡಸು ಸ್ವರದಲ್ಲಿ ಬೆಚ್ಚಿ ಬೀಳಿಸುತ್ತಾನೆ.

ನನ್ನನ್ನು ನಾನಾಗೆ ನೋಡೋ ಹುಡುಗ
ನಾ ನೀನಲ್ಲ, ನಿನ್ನಂತೆ ಎಂದೂ ಆಗಲಾರೆ
ಏಕೆಂದರೆ ನಾ ಹೆಣ್ಣು, ಹೆಣ್ಣಾಗಿಯೆ ನಾ
ಮೆರೆಯ ಬಯಸುತ್ತೇನೆ, ಹೌದು ಖಾಲಿ
ಉಳಿಯಬಯಸುವುದಿಲ್ಲ.

ವರ್ಷ

ನಾನು ನಿರಾಶಾವಾದಿ ಖಂಡಿತಾ ಅಲ್ಲ. ಮುಗಿದ ವರ್ಷದ ಕ್ರೌರ್ಯ ಕಂಡು ಈ ಸಾಲುಗಳೂ, ಮನಸ್ಸಿನೊಳಗಡೆ ಭೀತಿಯೂ ಹುಟ್ಟಿವೆ.

ನಗಾರಿ ಸದ್ದಿನ ಎದೆ ಬಡಿತದೊಂದಿಗೆ
ಕಂಪಿಸುವ ಮೈಯ ನಾದದೊಂದಿಗೆ
ತಾಳ ಹಾಕುವ ನಡುಗುವ ಕೈಗಳಿಂದ,
ಹೆಬ್ಬಾಗಿಲನ್ನೂ, ಅದರ ಹಿಂದಿದ್ದ
ಅಕರಾಳ ವಿಕರಾಳ, ಕಹಿ ಕಹಿ
ಜೀವ ಹಿಂಡುವ ಯಾತನೆಯ
ಉಸಿರುಗಟ್ಟಿಸುವಷ್ಟು ಅಳು ತರುವ
ವಿಧ ವಿಧ ನೋವುಗಳ ಸಂಪುಟಗಳನ್ನೂ
ಮುಚ್ಚಿಯಾಯಿತು.

ಮುಚ್ಚಿದ ಬಾಗಿಲಿಂದ ಕೇಳುವ
ರೋದನೆಯ ದನಿಗಳಿಗೆ ಹಾಗೂ ಹೀಗೋ
ಕಲ್ಲಾದ್ದದಾಯ್ತು.

ಅಗೋ!,

ಎದುರು ಮುಚ್ಚಿದ ಇನ್ನೊಂದು ಬಾಗಿಲು
ಈಗಷ್ಟೆ ಮುಚ್ಚಿದ ಬಾಗಿಲಿನ ಹಿಂದಿದ್ದ
ಯಾತನೆಗಳು ಇದರ ಹಿಂದಿದ್ದರೆ?
ಬಾಗಿಲು ತೆಗೆದು ಹೆಜ್ಜೆಯಿಡುವಾಗಲೇ
ಹಾರಬಹುದೇ ಕ್ರೂರಾತಿ ಕ್ರೂರ ರಣ ಹದ್ದುಗಳು
ಯಾರದೋ ಜೀವವನ್ನು ಹಸಿ ಹಸಿಯಾಗಿ ಕಚ್ಚಿ ತಿನ್ನಲು ?
ಎಳೆ ಎಳೆ ಹಾಲುಗಲ್ಲದ ರಕ್ತ ಹೀರಲು?
ಕಬ್ಬಿಣದ ಸರಳುಗಳು, ಕಾದಿರಬಹುದು
ಯಾರದೋ ಕರುಳನ್ನು ಹೊರಬಗೆಯಲು....
ಅದೆಷ್ಟು ಸುನಾಮಿಗಳೋ, ಜ್ವಾಲಾಮುಖಿಗಳೋ
ಎಲ್ಲೆಲ್ಲಿ ಸುಟ್ಟು ಕರಕಲಾಗುತ್ತಾವೋ ಜೀವಗಳು
ಎಂಥೆಂಥಹ ಅವಘಡಗಳು ಕೈ ಕಟ್ಟಿ ಕಾದು ಕುಳಿತಿಯುವೆಯೋ
ಯಾರು ಯಾರು ಬಿಟ್ಟು ಹೋಗುವರೋ ಇಹವನ್ನು

ದೇವರೇ, ಈ ವರ್ಷವನ್ನವಾದರೂ ಸುಂದರಗೊಳಿಸು....

Friday, December 20, 2013

ಕ್ರಿಸ್ಮಸ್!



ಕ್ರಿಸ್ಮಸ್ ಬಂದಾಗೆಲ್ಲಾ ನೆನಪಾಗುವುದು ವಾಮ್ (ಜಾರ್ಜ್ ಮೈಕಲ್ ಮತ್ತು ಆಂಡ್ರ್ಯೂ ರೆಗ್ಲೀ) ನ ಈ ಹಾಡು...

ಪ್ರತೀ ಯುಗಾದಿ ಹೊಸತನ ತರಲಿ ಅಂತ ನಾವು ಆಶಿಸಿದಂತೆಯೇ ಇದೆಯಲ್ಲವೇ ಈ ಹಾಡಿನ ಜಾಡೂ ? ಕಳೆದ ಕ್ರಿಸ್ಮಸ್ ನಲ್ಲಿ ಪ್ರೇಮ ನಿವೇದಿಸಿದ ಹುಡುಗ ಅದಾಗಲೇ ಮುರಿದು ಬಿದ್ದ ಸಂಬಂಧದ ಬಗ್ಗೆ ಹಾಡುತ್ತಿದ್ದಾನೆ. ವಿರಹಿಯೋರ್ವನ ದಟ್ಟ ಯಾತನೆ ಹಾಗೂ ಹೊಸ ಪ್ರೀತಿ-ಸಂಬಂಧದ ಬಗೆಗಿನ ಕನಸಿನ ಚಿಗುರೂ ಇದರಲ್ಲಿದೆ.
೧೯೮೪ರ ಈ ಹಾಡು ಇಂದಿಗೂ ಒಂದಷ್ಟು ವಿರಹಿಗಳ ರಾಷ್ಟ್ರಗೀತೆ ಆಗಿದ್ದರೆ ಆಶ್ಚರ್ಯವೇನಲ್ಲ. ಯಾವತ್ತೂ ಚಾಲ್ತಿಯಲ್ಲಿರುವ ಕ್ಲಾಸಿಕ್ ಹಾಡುಗಳಲ್ಲಿ ಇದೂ ಒಂದು. My all time fav.
http://www.youtube.com/watch?v=E8gmARGvPlI

ಹೀಗೊಬ್ಬಳು ಸೋಲಿಗಳು


ಉಪ್ಪಿನ ಕಣ್ಣೀರ ಜೊತೆ ಕಲೆಸಿದ್ದು 
ಕಹಿಯಾದ ಸೋಲಿನ ಗುಕ್ಕು
ಪ್ರತೀ ಗುಕ್ಕನ್ನೂ ನುಂಗಿದ್ದು
ಹತಾಶೆಯ ತಟ್ಟೆಯಲ್ಲಿಟ್ಟು
ಅಸಹಾಯಕತೆಯ ಈ ಭೋಜನ
ಬದುಕಿನ ಮೇಲಿನ ಅತ್ಯಾಚಾರ.
ದೇಹವ ಕೊಂದವನಷ್ಟೇ 
ಕೊಲೆಗಾರನಲ್ಲ

ನಿಜ

ನಿಜವೆನ್ನುವುದು ಯಾವುದು

ನೀ ಅಂದಿದ್ದು ನಿಜವೇ? ನಾ ತಿಳಿದುಕೊಂಡಿದ್ದೆ
ಅವರು ಬರೆದಿದ್ದೆ? ಇವರು ಒಪ್ಪಿಕೊಂಡಿದ್ದೆ
ಸುತ್ತಲಿನ ಕೋಟಿ ಮುಖಗಳಲ್ಲಿ ಅದಾವ ಮುಖವು ನಿಜ

ಶಿಲೆಯಲ್ಲಿ ಕೆತ್ತಿದ ಮಾತ್ರಕೆ ನಿಜವಾಗುವುದೇನು?
ತಾಳೆಗರಿಗಳಲಿ ಗೀಚಿದ್ದು ಮಾತ್ರ ನಿಜವೇನು?
ಪ್ರಾಚೀನವಾದುದಕ್ಕೆಲ್ಲ ನಿಜದ ಮುದ್ರಾಧಾರಣೆ ಇದೆಯೇನು? 

ಇಲ್ಲಿರುವುದು ನಿಜವೇ? ಹಾಗಾದರೆ ಇಲ್ಲದ್ದು ನಿಜವಲ್ಲವೇ?
ಇಷ್ಟಕ್ಕೂ ನಿಜವನ್ನು ಕಂಡವರೆಷ್ಟು ? ತಿಳಿದವರೆಷ್ಟು?
ಕಂಡದ್ದೂ, ತಿಳಿದದ್ದೂ ನಿಜವೇ ?

ಕೊನೆಗೆ ನೀವು ಹೌದು ಎಂದರೂ....ಅದೂ ನಿಜವೇ?

Tuesday, December 10, 2013

ಹರಿದು ಹೋಗುವುದೇ ಅದರ ಗುಣ
ನೀರಾಗಲಿ, ಸಂಬಂಧವಾಗಲಿ....

Monday, December 9, 2013

ವಿಷ ಕಹಿಯಿರಲಿಕ್ಕಿಲ್ಲ ಸೋಲಿನಷ್ಟು
ಸಾವು ಘೋರವಿರಲಿಕ್ಕಿಲ್ಲ ಬದುಕಿನಷ್ಟು 

Wednesday, December 4, 2013

ವಾಮನ

ನಾ ಬಲಿಯಾಗುತ್ತಲೇ ಹೋದೆ
ನೀ ತ್ರಿವಿಕ್ರಮನಾಗಲೇ ಇಲ್ಲ.
ಕೊನೆಗೆ ವಾಮನನೂ....

Sunday, November 17, 2013

ಇಷ್ಟ ಆಯ್ತು! ನೀವೂ ನೋಡಿ

 http://www.youtube.com/watch?v=z8N_rMcxRGU
 
ಈ ಪಿಗ್ಗಣ್ಣ ಒದ್ದಾಡೋ ಪರಿ ನೋಡಿ! ನನ್ನ ಮಗನಂತೂ ಬಿದ್ದೂ ಬಿದ್ದೂ ನಗ್ತಾನೆ. ನಿಮಗೂ, ನಿಮ್ಮ ಮಕ್ಕಳಿಗೂ ಇಷ್ಟ ಆಗಬಹುದು. ಅಂದ ಹಾಗೆ ಹಾಡಂತೂ ಭಾರೀ ಮುದ್ದಾಗಿದೆ. ಈ ಹಾಡು ಹಾಡಿದ್ದು ಮಾಲ್ಡೋವನ್ ಹಾಡುಗಾರ್ತಿ ಬರೀ ಹನ್ನೊಂದು ವರ್ಷದ ಕ್ಲಿಯೋಪಾತ್ರ ಸ್ಟಾರ್ಟನ್. ಆಗಾಗಲೇ ನಾಲ್ಕು ಆಲ್ಬಮ್ ಹೊರತಂದಿರುವ ಇವಳು ಹಾಡಲಾರಂಭಿಸಿದ್ದು ಮೂರುವರ್ಷದವಳಿರುವಾಗ.
 ಇವಳ ಬಗ್ಗೆ ಓದಿ ನೋಡಿ. http://en.wikipedia.org/wiki/Cleopatra_Stratan
ಮತ್ತೆ ಕುಕೀಸ್ ತಿನ್ನಲು ಒದ್ದಾಡಿದ ಪಿಗ್ಗಣ್ಣನ ಹೆಸರು ಓರ್ಮಿ! 
ಎರಡರ ಬೇರೆ ಬೇರೆ ಲಿಂಕ್ ಇಲ್ಲಿದೆ.
http://www.youtube.com/watch?v=CxmbmcDrXRk
http://www.youtube.com/watch?v=dS1Gf7qq2sI

Monday, September 23, 2013

ಎಂದೂ ಮುಗಿಯದ ಯುದ್ಧ

ಜಗದೀಶ್ ಕೊಪ್ಪ ಅವರ ನಕ್ಸಲ್ ಇತಿಹಾಸ ಕಥನ, ಎಂದೂ ಮುಗಿಯದ ಯುದ್ಧ ಓದಿದೆ. ರಕ್ತಸಿಕ್ತ ಹೆಜ್ಜೆ ಗುರುತುಗಳ ಬಳಿ ಕೂತು, ಪ್ರತೀ ಹೆಜ್ಜೆಯ ಹಿಂದಿನ ಕಥೆಯನ್ನಾಲಿಸಿದಂತಾಯ್ತು. ಚಾರು ಮುಜಮ್ದಾರ್, ವೆಂಟಟಾಪು ಸತ್ಯನಾರಾಯಣ, ಕೊಬಡ್ ಗಾಂಡಿ, ಅನುರಾಧ, ಕೊಂಡಪಲ್ಲಿ ಸೀತಾರಾಮಯ್ಯ ಎಲ್ಲರ ಜೀವನ, ಹೋರಾಟಗಳ ಪರಿಚಯವಿದೆ ಇದರಲ್ಲಿ. ಪ್ರತೀ ಮಾಹಿತಿಯನ್ನೂ, ಅದಕ್ಕೆ ಸಂಬಂಧಿಸಿದ ಅಂಕಿ -ಅಂಶಗಳನ್ನು ಕೊಪ್ಪ ಅವರು ಕಲೆ ಹಾಕಿದ ರೀತಿ ಆಶ್ಚರ್ಯ ಹುಟ್ಟಿಸುತ್ತದೆ. ಕಥನದದ್ದುಕ್ಕೂ ಕಾಡುವ ವಿಷಾದವನ್ನು ಕೊಪ್ಪ ಓದುಗರೊಂದಿಗೆ ಹಂಚಿಕೊಳ್ಳುತ್ತಾ ಹೋಗುತ್ತಾರೆ. ಕೂಲಿ ಕಾರ್ಮಿಕರ, ಆದಿವಾಸಿಗಳ , ಸಣ್ಣ ಹಿಡುವಳಿದಾರರ , ಗೇಣಿದಾರರ , ಬಡ ರೈತರ ಹೀಗೆ ಎಲ್ಲರ ಅಸಹನೆ-ಆಕ್ರೋಶಕ್ಕೂ, ಅಷ್ಟೇ ಅಲ್ಲ, ನಿಟ್ಟುಸಿರು - ಕಣ್ಣೀರಿಗೂ ಸಕಾರಣಗಳನ್ನು ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ. ಬೇರೆ ಬೇರೆ ಆಯಾಮಗಳಲ್ಲಿ ನಕ್ಸಲರ, ಮಾವೋವಾದಿಗಳ ಧೋರಣೆ, ಅಭಿಪ್ರಾಯಗಳನ್ನು ತೆರೆದಿಡುತ್ತದೆ. ಕೇವಲ ನಕ್ಸಲರಷ್ಟೇ ಅಲ್ಲ, ಜಮೀನುದಾರರ, ಪೋಲಿಸರ ಹತ್ಯೆಗಳ ಬಗೆಯೂ ನಿಖರವಾಗಿ ಹೇಳುತ್ತಾರೆ ಕೊಪ್ಪ ಅವರು. ಜಿಜ್ಞಾಸೆ, ತರ್ಕ, ವಿವೇಚನೆಗಳಿಗೆ ನಿಲುಕದ ಕೊಲೆಗಳು, ಅಮಾನುಷ ಮುಖಗಳೂ ಪುಸ್ತಕ ಮಡಚಿಟ್ಟ ಮೇಲೂ ಕಾಡುತ್ತವೆ, ಬೊಬ್ಬಿಲಿ ಕಥಾ ಕಿವಿಯಲ್ಲಿ ಬೊಬ್ಬಿರಿಯುತ್ತದೆ. ಗದ್ದಾರ್ ಹಾಡೂ ಕೇಳಿ ಬರುತ್ತದೆ. ವಿಷಾದದ ನಿಟ್ಟುಸಿರೂ ಹೊರ ಹೊಮ್ಮುತ್ತದೆ. ಕೋಶಿಯ ಜೀವನ ಕಥೆ, ವ್ಯಥೆಯೂ ಮನಸ್ಸ ಹಿಂಡಿತು.


ನಾನೆಂದೂ ನೋಡದ, ತಿಳಿಯದ ಇಂತಹ ಮಾಹಿತಿಗಳ ಕೊಟ್ಟಿದುದ್ದಕ್ಕಾಗಿ ಧನ್ಯವಾದಗಳು ಸರ್

Wednesday, September 18, 2013

ಎಂದೂ ಮಾತಾಡದ ಹುಡುಗಿ



ತೇಜಸ್ವಿಯವರ ಜುಗಾರಿ ಕ್ರಾಸ್ ಅಲ್ಲಿ ಮೇದರಹಳ್ಳಿಯ ದ್ಯಾವಮ್ಮನ ಮಗಳ ಪ್ರಸಂಗ ಬರುತ್ತದೆ. ಮೂಕಿ ದ್ಯಾವಮ್ಮನ ಮಗಳಾದ, ಹೆಸರೂ ಇಲ್ಲದ ಹುಡುಗಿ  ಮೂಕಿಯೇ ಎಂದು ಎಲ್ಲರೂ ತೀರ್ಮಾನಪಟ್ಟಿರುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಪವಾಡವೆಂಬಂತೆ ಸರಾಗವಾಗಿ ಮಾತನಾಡುತ್ತಾಳೆ ಹುಡುಗಿ.

 ತೇಜಸ್ವಿ ಅವಳನ್ನು ಎಂದೂ ಮಾತಾಡದ ಹುಡುಗಿ ಎಂದು ಕರೆದಿದ್ದಾರೆ. ದಾರಿ ಬದಿಯಲ್ಲಿ ನಿಂತು ರೆಂಜ ಹೂಗಳ ಮಾಲೆ ಮಾರುವ ಹೆಸರಿಲ್ಲದ ಈ  ಹುಡುಗಿಗೆ, ತನ್ನ ಬುಟ್ಟಿಯಲ್ಲಿದ ಎಲ್ಲಾ ಮಾಲೆಗಳನ್ನು ಮಾರುವ ಆಸೆ.
ತೇಜಸ್ವಿಯೇ ಹೇಳುವಂತೆ ಹೃದಯಹೀನ ಪ್ರಪಂಚದ ಮೇಲೆ ದುಃಖಗೊಂಡಿದ್ದ ಪುಟ್ಟ ಹುಡುಗಿಗೆ ಕೊನೆಗೆ ರಸ್ತೆಯಲ್ಲಿ ಕಾಣುವ ವಾಹನದಲ್ಲಿ ಇದ್ದವರಾದರೂ ಎಂತವರು? ಸಾಕ್ಷಾತ್ ಯಮನ ದೂತರು, ಕೊಲೆಗುಡಕರು. ನೆತ್ತಿಯ ಮೇಲೆ ಮುಷ್ಠಿಯಿಂ ಒಂದೇ ಒಂದು ಗುದ್ದಿ ಹುಡುಗಿಯನ್ನು ಕೊಲ್ಲುವಷ್ಟು ಕ್ರೋಧ, ಆಕ್ರೋಶದಲ್ಲಿದ್ದವರು

ಮುಂದಿನ ಚಿತ್ರಣವನ್ನು ತೇಜಸ್ವಿ ಯಾವ ಪರಿಯಲ್ಲಿ ಎಳೆ ಎಳೆಯಾಗಿ ಬಿಡಿಸಿತ್ತಿದಾರೆಂದರೆ, ಅವರ ಮಾತುಗಳಲ್ಲಿ ಓದಿ.
ದೌಲತ್ ರಾಮ್ ಚಕ್ಕನೆ ಒಂದು ನೋಟು ತೆಗೆದು ಹುಡುಗಿ ಕೈಲಿ ಕೊಟ್ಟು, ಕೈಲಿದ್ದ ಬುಟ್ಟಿ ಕಿತ್ತುಕೊಂಡಂತೆ ತೆಗೆದುಕೊಂಡು, " ಹೋಗು, ಹೋಗು " ಎಂದು ಗದರಿದ

ಬೆಳಗ್ಗಿಂದ ನಿಂತೂ ನಿಂತೂ, ಪ್ರತಿಯೊಂದು ವಾಹನ ಬಂದಾಗಲೂ ಪ್ರತೀಕ್ಷೆಯಿಂದ ಕಾದೂ, ಕಾದೂ ಹತಾಶೆಯಲ್ಲಿ ದುಃಖದಲ್ಲಿ ತನ್ನ ಕೈಯಲ್ಲಿ ಒಣಗುತ್ತಿದ್ದ ಕೊನೆಯ ಹೂ ಮಾಲೆಯನ್ನು ಎತ್ತಿ ಹಿಡಿದ ದ್ಯಾವಮ್ಮನ ಮಗಳಿಗೆ ದೌಲತ್ ರಾಮನ ವರ್ತನೆ ಎಷ್ಟು ದುಃಖ ತಂದಿತೆಂದರೆ ನೆತ್ತಿಯ ಮೇಲೆ ಮುಷ್ಠಿಯಿಂ ಅಪ್ಪಳಿಸಿದ ಹಾಗೇ ಆಯ್ತು! ಮರಗಳೆಲ್ಲ ಹುಚ್ಚರ ಹಾಗೆ ತಲೆ ಕೆದರಿಕೊಂಡು ಗಾಳಿಗೆ ತೂರಾಡುತ್ತ ಹಿಯ್ಯಾಳಿಸಿ ನಗುವಂತೆ, ನೋಡಿದಷ್ಟುದ್ದಕ್ಕೂ ಹಾಸಿ ಬಿದ್ದಿರುವ ರಸ್ತೆ ಕಠೋರ ಜೀವನದಂತೆ, ಮೋಡ ಕಿಕ್ಕಿರಿದಿದ್ದ ಆಕಾಶ, ಅವಳನ್ನು ಮುಚ್ಚಿ ಕೂಡಿಹಾಕಿದ ಡಬ್ಬಿ ಮುಚ್ಚಲದಂತೆ ಅಸಹನೀಯವಾಗಿ ಕಂಡಿತು. ಬೆಳಗ್ಗೆ ಬರುತ್ತಾ ಬುಟ್ಟಿಯ ತುಂಬಾ ಮಾಲೆಗಳೊಂದಿಗೆ ಹೊತ್ತು ತಂದಿದ್ದ ಅವಳ ಕಿನ್ನರ ಕನಸುಗಳೆಲ್ಲ ಧೂಳು ಹಿಡಿದು ಮುರುಟಿ ದುರ್ಭರವಾದವು. ಹುಡುಗಿಯ ಕಣ್ಣೊಳಗೆ ನೀರು ತುಂಬಿ ಪ್ರಪಂಚವೆಲ್ಲಾ ಮಂಜು ಮಂಜಾಯ್ತು.

ಹುಡುಗಿ ಹುಲ್ಲಿನ ಮಧ್ಯೆ ಬೈತಲೆ ಎಳೆದಂತಿದ್ದ ಕಾಲು ದಾರಿಯಲ್ಲಿ ಮೌನವಾಗಿ ಮ್ಲಾನವದನದಲ್ಲಿ ತಿರುಗಿ ಮಾತೇ ಆಡದೆ ಹೊರಟು ಹೋದಳು. ಬಂದಿದ್ದ ಮಾತು ಮತ್ತೊಮ್ಮೆ ಶಾಶ್ವತವಾಗಿ ನಿರ್ಗಮಿಸಿತ್ತು.

ಹುಡುಗಿ ನನಗೆ ಪದೇ ಪದೇ ಕಾಡುತ್ತಾಳೆ. ಮತ್ತೆ ಮುಂದುವರೆದ ಅವಳ ಮೂಕ ಪ್ರಪಂಚವೂ ಕಾಡುತ್ತದೆ. ಮಗಳು ಮಾತನಾಡುತ್ತಾಳೆ ಎಂದು ಸಂಭ್ರಮಿಸಿದ ದ್ಯಾವಮ್ಮ ನೆನಪಿಗೆ ಬರುತ್ತಾಳೆ. ಮಗಳೇನೋ ಚಿರಪರಿಚಿತ ಸನ್ನೆಯ ಭಾಷೆಗೆ ಮತ್ತೆ ಮೊರೆ ಹೋಗಿ ಆದುದ ಹೇಳಿಕೊಳ್ಳಬಹುದೋ ಏನೋ ಒಂದು ದಿನ. ಆದರೆ ಮಾತು ಮತ್ತೆ ಕಳೆದುಕೊಂಡ ಮಗಳ, ಜೀವನ ಪೂರ್ತಿ ಮಾತನಾಡದ ದ್ಯಾವಮ್ಮ ಅದೆಂತು ಸಂತೈಸುತ್ತಾಳೆ ?!? ಪ್ರಪಂಚ ಹೀಗೆಯೇ, ಎಂದು ಅದು ಹೇಗೆ ಸಮಾಧಾನಪಡಿಸಬಲ್ಲಳು

ಕೊನೆಗೂ ಬಾಯಿ ಬರದ ಹಸು ತನ್ನ ಕರುವನ್ನು ನೆಕ್ಕಿ ಸಂತೈಸುವ ಪರಿ ಕಣ್ಣಿಗೆ ಬರುತ್ತದೆ.

ಭಾಷೆಗೆ ನಿಲುಕದ ಸಂಕಟವನ್ನು, ತಳಮಳವನ್ನು ನಮ್ಮೊಳಗೆ ತೇಜಸ್ವಿ ಹುಟ್ಟು ಹಾಕುವ ಪರಿಯಿದು

ಎಂದೋ ನಿಮಗೆ ಹುಡುಗಿ ಸಿಗಬಹುದು, ನೋಯಿಸಬೇಡಿ ಎಂದಿದ್ದಾರೆಯೇ ತೇಜಸ್ವಿ?

Sunday, September 8, 2013

Friday, August 30, 2013

ಇನ್ನೂ ಬರಲಿಲ್ಲ ಕಳ್ಳ

ಪಾವ್ ನ ಒಂದು ದೊಡ್ಡ ತುಂಡು ನಿನಗಾಗಿಯೇ ತೆಗೆದಿಟ್ಟಿದ್ದೇನೆ ಬಾಲ್ಕನಿಯಲ್ಲಿ. ಸಣ್ಣ ವಾಟಿಯಲ್ಲಿ ನೀರೂ... ಅಲ್ಲ, ನಾ ಮರೆತರೆಡೈನಿಂಗ್ ಟೇಬಲ್ ಹಾದು ಪ್ಯಾಸೇಜು ಮೂಲಕ ಮಲಗುವ ಕೋಣೆಗೆ ಬಂದು,‘ ಯಾಕಿವತ್ತು ಏನೂ ಇಟ್ಟಿಲ್ಲ ಅನ್ನೋ ತರಹಗುರಾಯಿಸ್ತಾಯಿಲ್ಲ. ಯಾಕೆ ಇವತ್ತು ಬೆಳಗ್ಗಿಂದ ಸುದ್ದೀನೇ ಇಲ್ಲ! ನಿನ್ನೆ ಇಟ್ಟ ಮೊಳಕೆ ಬರಿಸಿದ ಕಾಳು ಸ್ವಾಹ! ಎಲ್ಲಿ ಹೋದೆಯೋ ?  ಇಡೀ ದಿನ ಹೊರಗಿದ್ದ ಪಾವ್ ಬಿಸಿಲಿಗೋ, ಗಾಳಿಗೋ ಗಟ್ಟಿಯಾಗುತ್ತೆ ಕಣೋ, ಬಂದು ತಿನ್ನೋ ಬೇಗ!

ಪುಣ್ಯಾತ್ಮ, ನೀನಾಗೇ ಬಂದು ಊಟ ತಿಂದು ಹೋಗ್ತೀಯಲ್ಲಾ? ಹೇಗೆ ಇದು ನನ್ನದೇ ಮನೆ ಅಂತ ಗುರುತು ಹಿಡಿಯುತ್ತೀ? ಹಿಂದಿನ ಜನ್ಮದ ಸಾಲ ಮರುವಸೂಲಿಗೆ ಬಂದಿದ್ದೀಯಾ? ಹೌದು, ಅವತ್ತು ನನ್ನ ಪುಟ್ಟನೊಡನೆ ನಡಕೊಂಡು ಬರುವಾಗ ರಸ್ತೆ ಮಧ್ಯದಲ್ಲಿ ಆರಾಮಾಗಿ ನಿಂತು ಎರಡೂ ಕೈಯಲ್ಲಿ  ದಾರಿಯಲ್ಲಿ ಬಿದ್ದ ಹಣ್ಣು ತಿಂತ ಇದ್ದವನು ನೀನೇನಾ? ಯಾವ ಹಣ್ಣೋ, ಏನು ಕಥೆಯೋ, ಯಾರೋ ನಿಂಗೆ ಅದನ್ನೆಲ್ಲಾ ತಿನ್ನಬಹುದು ಅಂತ ಹೇಳಿ ಕೊಟ್ಟಿದ್ದು ?ಅದು ಸರಿ, ನೀವೆಲ್ಲಾ ಒಂದೇ ಥರಾ ಕಾಣ್ತೀರಪ್ಪಾ! ಅದೇ ರೋಮ ಎದ್ದು ನಿಂತ ಗ್ರೇ ಶೇಡ್ ಫರ್ ಮೈ, ಚಿಕ್ಕ ಕಪ್ಪು ಕಣ್ಣುಗಳು, ರಾಮ ಎಳೆದ ಮೂರು ನಾಮ ಬೆನ್ನ ಮೇಲೆ! ನಾವೆಲ್ಲಾ ನಿನ್ನ ಕಣ್ಣಿಗೂ ಹಾಗೆಯೇ ಕಾಣುತ್ತೇವಾ ಮರಿ ? !?

Thursday, August 29, 2013

ಸ್ಮಶಾನವಲ್ಲ!

ಹಳೆಯ ನೆನಪುಗಳ
ಗೋರಿಗಳು ಇವು
ಸತ್ತ ಕನಸುಗಳ 
ಗೋರಿಗಳು ಇವು
ಇತ್ತೀಚೆಗಷ್ಟೇ ಸತ್ತ
ಕೊಳೆತು ನಾರುವ 
ಕನಸುಗಳೂ ಇವೆ...
ತೋರಿಸುತ್ತಾ ನಡೆದೆ ನೀನು ! 

ಅರೆ! ಮನಸ್ಸೆಂಬ ಮನಸಿದು 
ಗೋರಿಗಳು ಗುಂಪಾಗಿರುವ 
ಸ್ಮಶಾನವಲ್ಲ! 
ಗುಡಿಸಾಚೆ ಒಮ್ಮೆ
ಇಲ್ಲವೇ ಸುಟ್ಟೇ ಬಿಡು
ಎಲ್ಲವೂ ಮುಗಿಯತೆ? 

ಚೆಂದ ಕಟ್ಟೆ ಕಟ್ಟು
ಹೊಸ ಕನಸೆಂಬ ಬೀಜವಿದೆ ನನ್ನ ಬಳಿ 
ನೆಡೋಣವೆನು? 
ಹೆಮ್ಮರವಾದೀತು ಮರುಕ್ಷಣವೇ
ಚೆಂದ ಹೂಗಳೂ ನಕ್ಕೀತು...
ಒಣ ಹೂಗಳೂ, ತರಗಲೆಗಳೂ
ಬಿದ್ದೀತು, ತೊಂದರೆಯಿಲ್ಲ
ಅವಾಗವಾಗ ಗುಡಿಸಿದರಾಯಿತು ಅಲ್ಲವೇ? 


Done in Adobe Ideas

ನೀ ಬಿಟ್ಟು ಹೋದ ಹೆಜ್ಜೆ ಗುರುತುಗಳು...

Wednesday, August 28, 2013

Every human comes with a price tag!

ಸುತ್ತಲೂ ಮನುಜರು 
ಪ್ರತೀ ಮನುಜನಿಗೂ 
ಹುಟ್ಟಿನಿಂದಲೇ ಅಂಟಿಕೊಂಡ 
ದರಪಟ್ಟಿ! 
 ಹತ್ತಿರ ಹೋಗಿ ನೋಡಿ, 
 ಅಲ್ಲ, ನೀವಂದುಕೊಂಡಂತೆ 
 ಆ ದರ ದುಡ್ಡಲ್ಲ! 
 ಪ್ರತಿ ದರವೂ ಭಾವನೆಗಳಿಲ್ಲಿ 
 ಭಾವನೆಗಳಿಗೆ ಭಿಕರಿಯಾಗುವ 
ಶೂನ್ಯಾತ್ಮರಿವರು 
 ಕೆಲವರು ಅಹಂಕಾರಕ್ಕೆ 
ಕೆಲವರು ಸ್ವ- ಮರುಕಕ್ಕೆ 
ಕೆಲವರು ವಿಷಾದಕ್ಕೆ 
ಕೆಲವರು ದ್ವೇಷಕ್ಕೋ, ಮೋಹಕ್ಕೋ 
ಇನ್ನೂ ಕೆಲವರು ಸಾವೆಂಬ ಭಾವಕ್ಕೆ! 



Sunday, August 25, 2013

Saturday, August 24, 2013

Monday, August 19, 2013

Tuesday, August 13, 2013

ಮೌನ

ಅದೋ ಅಲ್ಲಿ ಮೌನ, 
ಹಲೋ ನೀ ಮೌನವೆ?
ಉಹೂಂ, ಮೌನ ಹಲೋ ಹೇಳುವುದಿಲ್ಲ 
ಬದಲಿಗೆ ಹೌದು ಎಂಬಂತೆ ತಲೆಯಾಡಿತು. 

ಇನ್ನೇನು ಮಾತಾಡಲಿ ಇವಳ ಬಳಿ ? 
ಇವಳು ಗೆಳತಿಯಲ್ಲ 
ಆದರೆ ಜೀವಮಾನವಿಡಿ ಒಟ್ಟಿಗಿರುತ್ತಾಳೆ 

ಟಿ ವಿ ನೋಡುವಾಗ, ಪಕ್ಕದಲ್ಲಿ 
ಬಟ್ಟೆ ಮಡಚುವಾಗ ಎದುರಲ್ಲಿ 
ಅಡುಗೆ ಮನೆಯಲ್ಲಿ ಬೆನ್ನ ಹಿಂದೆಯೇ 
ಊಫ್! ಬೇಡದ ನೆರಳಿನಂತೆ ಸದಾ 

ಮಗು ಬಂದರೆ ಮಾಯ, 
ಫೋನಿನ ಸದ್ದಿಗೂ ಮಾಯ!
ಎಲ್ಲಿಗೆ ಹೋಗುತ್ತಾಳೋ ಮಹಾರ್ಯ್ತಿ! 

ಮಾತು ಬೆಳ್ಳಿ, ಮೌನ ಬಂಗಾರವಂತೆ
ಈ ಅಂತೆ, ಕಂತೆಗಳು ಎಲ್ಲವೂ
ಯಾವನೋ ಕಡು ವಾಚಾಳಿಯದ್ದಿರಬೇಕು!




Sunday, August 11, 2013

Zendala art, after 2 long years !

ತಂತಿ ಬೇಲಿಯ ಒಂಟಿ ಕಾಗೆ

ಜಯಶ್ರೀ ಆಂಟಿ ಮನೆಗೆ ಚುಕ್ಕುಬುಕ್ಕು ಟೀಂ ಹೊರಟಿತ್ತು. ಆದರೆ ಕೊನೆ ಘಳಿಗೆಯಲ್ಲಿ ನನ್ನ ಮೈಸೂರು ಫ್ರೆಂಡ್ಸ್ ಬಂದಿದ್ದರಿಂದ ನಾನು ಹೋಗಲಾಗಲಿಲ್ಲ. ಸಿದ್ ಮತ್ತೆ ರಘು ಹೋಗಿ ಆಂಟಿ ಮಾಡಿದ ಎಲ್ಲವನ್ನೂ ತಿಂದು ಅವರಿಬ್ಬರ ಹತ್ತಿರ ಚೆಂದ ಟೈಮ್ ಸ್ಪೆಂಡ್ ಮಾಡಿ ಬಂದ್ರು, ನನ್ನ ಹೊಟ್ಟೆ ಉರಿಸಿದ್ರು ಕೂಡ. ಆದರೆ ಆಂಟಿ ನನಗೋಸ್ಕರ ಮಾಡಿದ ಊರಿನ ಹಲಸಿನ ತಿಂಡಿ ಪಾರ್ಸೆಲ್ ಮಾಡಿ ಕಳಿಸಿದ್ದಲ್ಲದೆ ನನಗೆ ಅವರ ಈ ಪುಸ್ತಕವನ್ನೂ ಕಳಿಸಿದ್ದರು. ಸರಿ, ಚೆಂದದ ತಿಂಡಿ ತಿನ್ನುತ್ತಾ ಪುಸ್ತಕ ಶುರು ಮಾಡಿದೆ. ಎಲ್ಲಾ ಕಥೆಗಳೂ ಒಂದಕ್ಕಿಂತ ಒಂದು.  ಕಣ್ಣೆಲ್ಲಾ ಒದ್ದೆ. ಬರೆದ ರೀತಿಯಂತೂ ತುಂಬಾ ತುಂಬಾ ಆಪ್ತವಾಗಿದೆ.  ಪಬ್ಲಿಶ್ ಆದ ವರ್ಷ ಪುಣ್ಯಕ್ಕೆ ೨೦೧೨ ಆಗಿತ್ತು. ಚುಕ್ಕುಬುಕ್ಕುವಲ್ಲಿ ಹಾಕಲೇಬೇಕು ಎಂದು ಅವರ ಹತ್ತಿರ ವಿವರಗಳನ್ನು ಕೇಳಿದೆ, ಕೂಡಲೇ ಎಲ್ಲವನ್ನೂ ಕಳುಹಿಸಿ ಕೊಟ್ಟರು.  ನಿಮ್ಮ ವಿಶ್ವಾಸಕ್ಕೆ ನಾನು ಏನು ಹೇಳಲಿ ಗೊತ್ತಾಗ್ತಾ ಇಲ್ಲ.  ಥ್ಯಾಂಕ್ಸ್ ಆಂಟಿ....

ಪುಸ್ತಕದ ಎಲ್ಲಾ ಕಥೆಗಳಲ್ಲಿ ಯಾವುದನ್ನು ಉಚಿತ ಭಾಗಕ್ಕೆ ಹಾಕೋದು ಅಂತ ಒದ್ದಾಡಿ ಹೋಗಿದ್ದೆ. ಕಂಬದ ಮೇಲಿನ ಚಿತ್ತಾರ ಅತೀ ಇಷ್ಟ ಆದುದ್ದು, ಅದಕ್ಕೆ ಅದನ್ನೇ ಹಾಕಿದೆ. 

ಓದಿ ನೋಡಿ...

Thursday, August 8, 2013

ಸೆಳೆತ

ಮನದ ಕಡಲಲಿ
ಭಾವಗಳ ಮೊರೆತ
ಮುಳುಗುವ ಹಡಗಲಿ
ಕುಳಿತವಗೆ ನಿನ್ನದೇ ಸೆಳೆತ

ಮುಕ್ತಾಯ

ನಿಮ್ಮ ಪದಕೋಶ ಮುಗಿಯಿತೇ? 
ಅಲ್ಲಿಗೆ ಮುಗಿಯಿತು  
ಸುಂದರ ಸಂಬಂಧವೂ....

Wednesday, August 7, 2013