Saturday, October 3, 2015

Putta

ದಿನ - ೧

ಇದೇ ಮೊದಲ ಸಲ ಪುಟ್ಟನಿಗೆ ೯೦ ಮಾರ್ಕ್ಸಿಗೆ ಮೂರು ಘಂಟೆಯ ಅವಧಿಯ ಪರೀಕ್ಷೆ. ಮೂರು ಘಂಟೆ ಏನು ಮಾಡುತ್ತಾನೋ ಎಂದು ಅವನಮ್ಮ ಯೋಚಿಸುತ್ತಿದ್ದರು. ಅಂತೂ ಇಂತೂ ಸ್ಕೂಲು ಬಿಡೋ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಹೋದರೆ ಸೋಶಿಯಲ್ ಪರೀಕ್ಷೆ ಮುಗಿಸಿ ಬಂದ ಪುಟ್ಟ ಕುಣಿದುಕೊಂಡು ಬರಲಿಲ್ಲ, ಅಮ್ಮ ಅಂದುಕೊಂಡರು, ಪರೀಕ್ಷೆ ಕಷ್ಟವಿತ್ತೋ ಏನೋ ಅಂತ. ಕೇಳಿದರೆ, " ಇಲ್ಲ ಅಮ್ಮ, ನೀ ಹೇಳಿಕೊಟ್ಟಿದ್ದು  ಬಂದಿತ್ತು, ನಾ ಬರೆದೆ. ಸುಲಭವಿತ್ತು" ಅಂದ. ಸರಿ, ಮನೆಗೆ ಹೋದ ಮೇಲೆ ಕೇಳಿದರಾಯಿತು  ಅಂದುಕೊಂಡರು ಅಮ್ಮ. ಮನೆಗೆ ಬಂದು ಊಟ, ಮುದ್ದು, ಮಿಸ್ಡ್ ಯೂ ಅಮ್ಮ ಎಲ್ಲ ಆದ ಮೇಲೆ ಪ್ರಶ್ನೆ ಪತ್ರಿಕೆ ತೆಗೆದು ಪ್ರಶ್ನೆಗಳನ್ನೆಲ್ಲ ಕೇಳುತ್ತಾ ಬಂದರೆ ಎಲ್ಲ ಬರೆದಿದ್ದಾನೆ ಕಳ್ಳ! ಅಮ್ಮ ಕುಶಿಯಾದರು. ಅಷ್ಟರಲ್ಲೇ ಬಿಟ್ಟ ಸ್ಥಳವೊಂದನ್ನು ತೋರಿಸಿ " ಅಮ್ಮಾ, ನನ್ನ ಮುಂದೆ ರಜತ್ ಕೂತಿದ್ದ. ಅವನಿಗೆ ಇದರ ಉತ್ತರ ಗೊತ್ತಿರಲಿಲ್ಲ, ಹಿಂದೆ ತಿರುಗಿ ನನ್ನ ಹತ್ತಿರ ಕೇಳಿದ, ನಾ ಹೇಳಿ ಕೊಟ್ಟೆ" ಅಂದ. ಅಮ್ಮ ಏನಾದರೂ ಹೇಳುವಷ್ಟರಲ್ಲಿ ಅದರ ಮುಂದಿನ ಪ್ರಶ್ನೆ ತೋರಿಸಿ, " ನಂಗೆ ಇದು ಗೊತ್ತಿರಲಿಲ್ಲ, ನಾ ಕೇಳಿದೆ, ಅವನೂ ಹೇಳಿ ಕೊಟ್ಟ" ಅಂದುಬಿಟ್ಟ. ಸ್ವಲ್ಪ ಹೊತ್ತು ಸುಮ್ಮನಿದ್ದ ಅಮ್ಮ " ಪುಟ್ಟ, ಎಕ್ಸಾಮ್ ಯಾಕೆ ಮಾಡ್ತಾರೆ ಗೊತ್ತ? ನಿಂಗೆ ಇಷ್ಟರವರೆಗೆ ಮಾಡಿದ ಪಾಠಗಳು ಎಷ್ಟು ಅರ್ಥ ಆಗಿವೆ, ಎಷ್ಟು ನೆನಪಿನಲ್ಲಿವೆ ಅಂತ ಗೊತ್ತು ಮಾಡೋದಕ್ಕೆ, ನೀನು ಹಾಲಿನಲ್ಲಿ ಕೂತ ಅಷ್ಟೂ ಹೊತ್ತು ಅಂದರೆ  ಮೂರು ಘಂಟೆನೂ ಯಾರ ಹತ್ತಿರನೂ ಮಾತನಾಡದೆ ಯೋಚಿಸಿ ಉತ್ತರ ಬರೆಯಬೇಕು. ನೀನು ಯಾರ ಬಳಿಯೂ ಕೇಳಬಾರದು, ಯಾರಿಗೂ ಹೇಳಿಯೂ ಕೊಡಬಾರದು. , ಇದಕ್ಕೇ ನೀನು ಆವಾಗಿಂದ ಒಂಥರಾ ಇದ್ದೀಯಲ್ಲ? ನೀನು ತಪ್ಪು ಮಾಡಿದ್ದು ಅಂತ ನಿನಗೆ ಗೊತ್ತಾಗಿದೆ ಅದಕ್ಕೆ ನಿಂಗೆ ಅಮ್ಮನಿಗೆ ಹೇಗೆ ಹೇಳೋದು ಅಂತ ಸುಮ್ಮನಿದ್ದೆ ಆಲ್ವಾ" ಎಂದರು. ಪುಟ್ಟ ಹೌದು ಎಂದು ತಲೆಯಾಡಿಸಿದ " ನಿನಗೆ ತಪ್ಪು ಅನಿಸಿದನ್ನ ಯಾವತ್ತೂ ಮಾಡಬಾರದು, ಅರ್ಥ ಆಯ್ತಾ ?" ಅಂದರು ಅಮ್ಮ.  ಆಯಿತು ಅಂದ ಪುಟ್ಟ "ರಾತ್ರಿ ಪಪ್ಪಾ ಬಂದ ಮೇಲೆ ನೀನೇ ಹೇಳಬೇಕು" ಅಂತನೂ ಅಂದ. ರಾತ್ರಿ ವಿಷಯ ಗೊತ್ತಾದ ಪಪ್ಪ, ಪುಟ್ಟನನ್ನು ಕರೆದು " ನಿಂಗೆ ಸೊನ್ನೆ ಬಂದರೂ ಪರವಾಗಿಲ್ಲ ಪುಟ್ಟ, ಇನ್ನೊಬ್ಬರನ್ನು ಕೇಳಿ ಬರೀಬಾರದು" ಅಂದರು.

ದಿನ - ೨

ಇವತ್ತು ಇಂಗ್ಲೀಷ್ ಪರೀಕ್ಷೆ. ಇವತ್ತು ಮಗನ ಮುಖದಲ್ಲಿ ಖುಷಿಯಿತ್ತು, ಅಮ್ಮನಿಗೂ ಖುಷಿಯಾಯ್ತು. ಮನೆಗೆ ಬಂದು ಯಥಾ ಪ್ರಕಾರ ಊಟ, ಮುದ್ದು, ಎಷ್ಟು ಮಾರ್ಕ್ಸ್ ಬರಬಹುದು ಎಂದು ಲೆಕ್ಕಾಚಾರ ಹಾಕಿಯಾದ ಮೇಲೆ ಪುಟ್ಟ ಮೆಲ್ಲನೆ ಬಾಯಿ ಬಿಟ್ಟ. " ಅಮ್ಮ, ಇವತ್ತು ನಿನಗೊಂದು ಗುಡ್ ನ್ಯೂಸ್, ನಿಂಗೆ ತುಂಬಾ ಕುಶಿಯಾಗುತ್ತೆ. ಇವತ್ತೇನು ಆಯ್ತು ಗೊತ್ತಾ? ನನ್ನ ಪಕ್ಕ ನಾಲ್ಕನೇ ಕ್ಲಾಸಿನ ಹುಡುಗ ಕೂತಿದ್ದ, ಅವನು  ನನ್ನ ಕೊಶ್ಚನ್ ಪೇಪರ್ ನೋಡಿ, ( ತಾನು ಉತ್ತರಿಸಿದ ಎಲ್ಲಾ ಕೊಶ್ಚನ್ನಿಗೂ ಟಿಕ್  ಮಾಡೋ ಅಭ್ಯಾಸ ಪುಟ್ಟನದು) ಜಮ್ಬಲ್ಡ್ ವರ್ಡ್ಸ್ ಒಂದಕ್ಕೆ ನಾ ಟಿಕ್ ಮಾಡಿಲ್ಲ ಅಲ್ಲಾ, ಇದು ಬರೀಲಿಲ್ವ ನೀನು ಅಂತ ಕೇಳಿದ, ನಾ ಮಾತೂ ಆಡದೆ ಸುಮ್ಮನೆ ತಲೆ ಹೀಗೆ ಮಾಡಿದೆ " ಎಂದು ಇಲ್ಲ ಎಂಬಂತೆ ತಲೆಯಾಡಿಸಿದ.  "ಅದಕ್ಕೆ ಅವನು ಅದು ವೀಟ್ (wheat) ಕಣೋ, ಬರಿ ಅಂದ, ನಾ ಬರೆಯಲ್ಲ ಅಂದೆ. ಅವನು ನಿನಗೊಂದು ಮಾರ್ಕ್ಸ್ ಸಿಗುತ್ತೆ, ಬರಿಯೋ ಅಂದ, ಆದ್ರೆ ಅಮ್ಮ, ನಾನು ನಿಂಗೆ ಪ್ರಾಮಿಸ್ ಮಾಡಿದ್ದೆ ಅಲ್ಲಾ. ನಾ ಬರೆದ್ರೆ ನಿಂಗೆ ಚೀಟ್ ಮಾಡಿದ ಹಾಗೆ ಆಗುತ್ತೆ ಅಂತ ನಾ ಬರೀಲಿಲ್ಲ" ಅಂದ. ಅಮ್ಮ " ಜಾಣ, ನೀ ಮಾಡಿದ್ದು ಸರಿ" ಎಂದು ತಲೆ ಸವರಿದರು. ಅವರ ಕಣ್ಣಲ್ಲಿ ಖುಷಿಯ ಕಣ್ಣೀರು ಮತ್ತು ಮನಸ್ಸಲ್ಲಿ ದೇವರೇ, ಈ ಮಗು ದೊಡ್ಡವನಾದ ಮೇಲೂ ಇಷ್ಟೇ ಒಳ್ಳೆಯವನಾಗಿರಲಿ ಎಂಬ ಪ್ರಾರ್ಥನೆಯಿತ್ತು.