Saturday, July 23, 2016

ಅಘೋಷ್

ಅಘೋಷ್

ಮೂಕವಾಗಿಸಿದ್ದ ಸೆಲ್ ಫೋನ್ ಹನ್ನೆರಡನೇ ಸಲ ತನ್ನ ಬೆಳಕು ಚೆಲ್ಲಿ ತನ್ನ ಕಂಪನದಿಂದ ತಾನೇ ತಿರು ತಿರುಗಿ ಸುಮ್ಮನಾಯ್ತು. ಮೀಟಿಂಗ್ ಉದ್ದಕ್ಕೂ ಮುಳ್ಳಿನ ಮೇಲೆ ಕೂತಂತೆ ಚಡಪಡಿಸುತ್ತಿದ್ದ ಅಘೋಷ್ ಕಾನ್ಸಫರೆನ್ಸ್ ಹಾಲಿನಿಂದ ಹೊರ ಬರುವಷ್ಟರಲ್ಲಿ ಗಡಿಯಾರ ಒಂಭತ್ತೂಮುಕ್ಕಾಲು ತೋರಿಸುತ್ತಿತ್ತು. ‘ ಅಯ್ಯೋ ಅಚ್ಚನ್ ಅದೆಷ್ಟು ಸಲ ಕಾಲ್ ಮಾಡಿದ್ದಾರೋ ’ ಎಂದುಕೊಂಡು ತನ್ನ ಕ್ಯಾಬಿನ್ ಗೆ ದಾಪುಗಾಲು ಹಾಕಿಬಂದವನೇ ಟೇಬಲ್ ಮೇಲಿದ್ದ ಸೆಲ್ ಕೈಗೆತ್ತಿಕೊಂಡು ತಪ್ಪಿದ ಕರೆಗಳ ಸಂಖ್ಯೆ ನೋಡಿ ಒಂದರೆಗಳಿಗೆ ಗಾಭರಿಯಾದ. ಏಳು ಕರೆಗಳು ಅಚ್ಚನ್ ಅವರದ್ದು ಹಾಗೂ ಉಳಿದ ಐದು ಕೇರಳದ ಯಾವುದೋ ಬೇರೆ, ಬೇರೆ ಸ್ಥಿರ ದೂರವಾಣಿಯಿಂದ ಬಂದವುಗಳು. ಅಚ್ಚನ್ ಎಂದೂ ಪದೇ ಪದೇ ಕರೆ ಮಾಡುವವರಲ್ಲವಲ್ಲ ಎಂದುಕೊಂಡು ಅವರಿಗೆ ಕರೆ ಮಾಡಿದ. ಲೈನ್ ಕಟ್ಟಾಯ್ತು, ಪದೇ ಪದೇ ಪ್ರಯತ್ನಿಸಿದ, ಉಹೂಂ, ಏನೂ ಪ್ರಯೋಜನವಾಗಲಿಲ್ಲ. ಸರಿ, ಕಾರಿನಲ್ಲಿ ಕೂತು ಮಾಡಿದರಾಯ್ತು ಎಂದುಕೊಂಡವನೇ ತನ್ನ ಲ್ಯಾಪ್ ಟಾಪ್ ಅನ್ನು ಬ್ಯಾಗಿಗೆ ತುರುಕಿ ಬಾಗಿಲ ಬಳಿ ಬಂದು ಕಾರ್ಡ್ ಉಜ್ಜಿದ. ಎಂದಿನಂತೆ ಗಾರ್ಡ್ ಹಾಕಿದ ಸಲ್ಯೂಟ್ ಹಾಗೂ ಅವನು ಸಾಬ್ ಎಂದು ಏನೋ ಹೇಳಲು ಹೊರಟದ್ದನ್ನು ಕಣ್ಣಂಚಿನಿಂದಲೇ ನೋಡಿಯೂ ನೋಡದವನಂತೆ ಅಲಕ್ಷಿಸಿ ಲಿಫ್ಟ್ ಒಳಗೆ ನುಗ್ಗಿದ.  ಬೇಸ್ ಮೆಂಟಿನಲ್ಲಿ ಲಿಫ್ಟ್ ನಿಂದ ಹೊರಬರುತ್ತಿದ್ದಂತೆ  ಅಷ್ಟರವರೆಗೂ ಗಮನಕ್ಕೆ ಬಾರದಿದ್ದ ಮಳೆಯ ಶಬ್ದ ಕಿವಿಗೆ ಬಡಿಯಿತು. ಬೇಸ್ ಮೆಂಟಿನಲ್ಲಿ ಸಣ್ಣಗೆ ನೀರು ತುಂಬಲು ಶುರುವಾಗಿತ್ತು. 
ರಸ್ತೆಗೆ ಕಾರು ಏರುತ್ತಿದ್ದಂತೆ ಮತ್ತೆ ಅಚ್ಚನ್ ಗೆ ಕರೆ ಮಾಡಿದ. ಬ್ಯಾಟರಿ ಲೋ ಎನ್ನುತ್ತಾ ಸೆಲ್ ಕಣ್ಣು ಮುಚ್ಚಿತು. ಕಿರಿಕಿರಿಯೆನಿಸಿ ಫೋನನ್ನು ಪಕ್ಕದ ಸೀಟಿನ ಮೇಲೆ ಕುಕ್ಕಿದ. ಮಳೆ ಸ್ವಲ್ಪ ಜಾಸ್ತಿಯೇ ಇದೆ ಅನಿಸಿ ಮುಂದೆ ಕಣ್ಣು ಹಾಯಿಸಿದವನಿಗೆ ಕಂಡದ್ದು ವಿಂಡ್ ಶೀಲ್ಡ್ ಮೇಲೆ ಬೀಳುತ್ತಿದ್ದ ಅಗಾಧ ಪ್ರಮಾಣದ ನೀರನ್ನು ಒರೆಸಲು ಪ್ರಯತ್ನ ಮಾಡುತ್ತಿದ್ದ ವೈಪರ್ ಮತ್ತದರಿಂದಾಚೆ ಅಸ್ಪಷ್ಟ-ಮಸುಕು-ಮಬ್ಬು ಮಬ್ಬಾಗಿ ವಿವಿಧ ಆಕಾರ ತಳೆದ ಎದುರು ನಿಂತ ವಾಹನಗಳ ಕೆಂಪು ದೀಪಗಳು. ಇಡೀ ಸುತ್ತಮುತ್ತಲಿನ ವಾತಾವರಣ ಕೆಂಪಿನಲ್ಲಿ ಅದ್ದಿದ್ದಂತೆ ಕಾಣಿಸಿತು. ರಸ್ತೆಯ ದೀಪಗಳು, ಮಳೆಯ ಸದ್ದು, ಅದು ಹೊತ್ತು ತಂದ ಅಸಾಧ್ಯ ಚಳಿ ಆಫೀಸಿನ ಒತ್ತಡ, ಚಿಂತೆಗಳನ್ನು ಮಳೆಯ ನೀರಿನೊಟ್ಟಿಗೆ ಕಲೆಸಿ ಮರೆಸಿಬಿಟ್ಟಿತು.
ಅಘೋಷ್ ಅದು ಅವನ ಅಚ್ಚನ್ ಅವನಿಗೆ ಇಟ್ಟ ಹೆಸರು. ನನಗ್ಯಾಕೆ ಈ ಬೆಂಗಾಲಿ ಹೆಸರು ಬಂತು ಎಂದು ಕೇರಳದಲ್ಲೇ ಹುಟ್ಟಿ ಬೆಳೆದವನು ಯೋಚಿಸಿದ್ದು ಅದೆಷ್ಟು ಸಲವೋ. ಪ್ರಪಂಚದಲ್ಲಿ ಅವನಿಗಿದ್ದ ಏಕಮಾತ್ರ ಬಂಧು ಅವನ ತಂದೆ, ಅಚ್ಚನ್. ಎಂದೂ ಒರಟು ಮಾತನಾಡದೇ, ದನಿಯೇರಿಸದೇ ಜೀವನದ ಸೂಕ್ಷ್ಮ ಪಾಠಗಳನ್ನು ಅತೀ ಸೂಕ್ಷ್ಮವಾಗಿ ಹೇಳಿಕೊಟ್ಟವರು ಅವರು. ಕೇರಳದ ಬಹುತೇಕರಂತೆ ಅವರೂ ಶ್ರಮಜೀವಿ. ಸದಾ ಹಸನ್ಮುಖಿ, ಸಾಹಿತ್ಯ ಪ್ರೇಮಿ. ಮಗನಲ್ಲೂ ಸಾಕಷ್ಟು ಒಳ್ಳೆಯ ಆಸಕ್ತಿಗಳನ್ನು ತುಂಬಿದ್ದರು. ತ್ರಿಶ್ಶೂರಿನ ಹಳ್ಳಿಯೊಂದರಲ್ಲಿ ಒಂದು ಫಾರ್ಮ್ ಹೌಸ್ ಕೊಂಡುಕೊಂಡು ಬೇಕಾದ ಗಿಡ-ಮರಗಳ ಮಧ್ಯೆ ಖುಷಿಯಾಗಿ ಕಾಲಕ್ಷೇಪ ಮಾಡುತ್ತಿದ್ದರು. ಏನೇ ಆಗಲಿ ದಿನ ರಾತ್ರಿ ಒಂಭತ್ತು ಗಂಟೆಗೆಲ್ಲಾ ಅಪ್ಪ-ಮಗ ಮಾತನಾಡಲೇಬೇಕು. ಸುಮಾರು ಒಂದು - ಒಂದೂವರೆ ಗಂಟೆ ಸಾಗುತ್ತಿದ್ದ ಮಾತುಕತೆಯಲ್ಲಿ ಅಂದಿನ ದಿನಚರಿಯನ್ನು , ಆಫೀಸಿನ ಕಿರಿ-ಕಿರಿಗಳನ್ನು, ಖುಷಿಯ ವಿಷಯಗಳನ್ನು ಚಾಚೂ ತಪ್ಪದಂತೆ ಮಗ ಹೇಳಬೇಕು, ಅಚ್ಚನ್ ಅದನ್ನು ಸಾವಧಾನವಾಗಿ ಕೇಳಿಸಿಕೊಂಡು ತನಗೆ ತೋಚಿದ ಉತ್ತರ ಹೇಳಬೇಕು. ಅಘೋಷ್ ಕೆಲಸ ಹಿಡಿದು ಬೆಂಗಳೂರಿಗೆ ಬಂದು ಆರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಪದ್ಧತಿಯಿದು. ತಿಂಗಳಿಗೊಮ್ಮೆ ಊರಿಗೆ ಹೋಗಿ ಬರುತ್ತಿದ್ದ. ಬೇರೆ ಯಾರೊಂದಿಗೂ ಬೆರೆಯದೇ , ಅಂತರ್ಮುಖಿಯಾಗಿ ತನ್ನದೇ ಪ್ರಪಂಚದಲ್ಲಿ ಬದುಕುತ್ತಿದ್ದವನನ್ನು ಕಂಡರೆ ಅಚ್ಚನ್ ಗೆ ಆತಂಕವಾಗುತ್ತಿತ್ತು. ಅದನ್ನು ಪದೇಪದೇ ಹೇಳುತ್ತಿದ್ದರು ಕೂಡಾ. ಆದರೆ ಅಘೋಷ್ ಅದನ್ನ್ಯಾವುದನ್ನೂ ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ಸಾಕಷ್ಟು ಕನ್ನಡ ಕಲಿತಿದ್ದ, ತಕ್ಕಮಟ್ಟಿಗೆ ವ್ಯವಹಾರ ಜ್ಞಾನ ಅವನಿಗಿತ್ತು, ಟೀಮ್ ಅಲ್ಲಿ ಒಂದಾಗಿ ಕೆಲಸ ಮಾಡಲು ಎಷ್ಟು ಬೇಕೋ ಅಷ್ಟು ಮಾತ್ರ ಬೆರೆಯುತ್ತಿದ್ದ. ಎರಡು ಬೆಡ್ರೂಮಿನ ಸ್ವಂತ ಮನೆ ಮಾಡಿಕೊಂಡು ತಾನೇ ಅಡುಗೆ ಮಾಡಿಕೊಂಡು ಆರಾಮಾಗಿದ್ದ. ಅವನ ಪ್ರಕಾರ ಅವನು ಪ್ರಪಂಚದ ಎಲ್ಲರಂತಿದ್ದ. ಆದರೆ ಅಚ್ಚನ್ ಗೆ ಮಾತ್ರ ಅವನು ಏಕಾಂಗಿ ಎಂದೆನಿಸುತ್ತಿತ್ತು. ಮದುವೆಯ ವಿಷಯ ಅವರು ಎತ್ತಿದ್ದಾಗೆಲ್ಲಾ ಉಪಾಯವಾಗಿ ವಿಷಯಾಂತರ ಮಾಡುತ್ತಿದ್ದ. ಮದುವೆಯ ಬಗ್ಗೆ ಯೋಚಿಸುವಷ್ಟು ದೊಡ್ಡವನಲ್ಲ ನಾನು ಎಂದುಕೊಳ್ಳುತ್ತಿದ್ದ.
ಅರ್ಧ ಗಂಟೆಯಾದರೂ ಎದುರಿನ ವಾಹನ ಮುಂದೆ ಸರಿಯದಿದ್ದಾಗ ಕಿಟಕಿ ಇಳಿಸಿ ಹೊರ ನೋಡಲು ಪ್ರಯತ್ನಿಸಿದ. ಮಳೆಯ ದಪ್ಪ ಹನಿಗಳು ಮುಖಕ್ಕೇ ರಾಚಿದವು. ತೀಕ್ಷ್ಣ, ಮೈ ನಡುಗಿಸುವ ತಂಗಾಳಿ ಕಾರಿನ ಒಳನುಗ್ಗಿತು, ಗಾಜೇರಿಸಿ ಸುಮ್ಮನೆ ಕುಳಿತ. ಫೋನ್ ಕಡೆ ಕೈ ಚಾಚಿದರೆ ಅದೂ ನಿರ್ಜೀವಗೊಂಡಿತ್ತು. ಕಾರಿನ ತುಂಬಾ ಸಿಡಿಗಳಿದ್ದರೂ ಯಾವುದನ್ನೂ ಹಾಕುವ ಮನಸ್ಸಿಲ್ಲದೇ ಎಫ್ ಎಮ್ ತಿರುಗಿಸಿದ. ಅದು ಭರಭರ ಶಬ್ದ ಮಾಡಿತೇ ವಿನಃ ಏನೂ ಕೇಳಿಸಲಿಲ್ಲ. ಮಳೆ ಎಂದಿನಂತಿಲ್ಲ ಎಂಬುದು ಅವಾಗಷ್ಟೇ ಅವನ ಗಮನಕ್ಕೆ ಬಂತು. ಹಿಂದಿನ ಸೀಟಿನಲ್ಲಿ ಬಿದ್ದಿದ್ದ ಕೋಟ್ ಹಾಕಿಕೊಂಡು ಕಾರಿನಿಂದ ಹೊರಬಿದ್ದ. ಚಳಿಗೆ ಮೈ ಅದುರಿತು, ಹನಿಗಳೂ ಮುಖಕ್ಕೇ ಬಡಿದ ರಭಸಕ್ಕೆ ಕಣ್ಣು ಸರಿಯಾಗಿ ಬಿಡಲಾಗಲಿಲ್ಲ. ಚರಂಡಿಯ ಕೊಳೆ, ಕಸವೆಲ್ಲಾ ಸೇರಿ ಕಾಲಿಡಲೂ ಅಸಹ್ಯವೆನಿಷ್ಟು ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಕೆಟ್ಟ ವಾಸನೆಯಿಂದ ಹೊಟ್ಟೆ ತೊಳೆಸಿದಂತಾಯ್ತು ಅವನಿಗೆ. ಮಳೆ ಬಂದರೆ ಬೆಂಗಳೂರು ಕರಗಿ ನೀರಾಗಿ ಹರಿಯುತ್ತದೆ ಅಂದುಕೊಂಡವನು ಕಣ್ಣಿನ ಮೇಲೆ ಕೈಯಿಟ್ಟು ದೂರಕ್ಕೆ ದೃಷ್ಟಿ ಹಾಯಿಸುವ ವ್ಯರ್ಥ ಪ್ರಯತ್ನ ಮಾಡಿದ. ಉದ್ದಕ್ಕೂ ವಾಹನಗಳ ಸಾಲು ಕಂಡಿತೇ ಹೊರತು ಮುಂದೆ ಸಾಗುವ ಯಾವ ಲಕ್ಷಣವೂ ಕಾಣಲಿಲ್ಲ. ಮುಂದೆ ನಿಂತಿದ್ದ ಆಟೋ ಬಳಿ ಸಾಗಿ “ ಏನಾಗಿದೆ ಸಾರ್ “ ಎಂದ. ಅಟೋದವನು “ ಏನೋ ಭಾರಿ ಮಳೆ ಸಾರ್, ಮುಂದೆ ಅಂಡರ್ ಪಾಸ್ ನೀರು ತುಂಬಿದೆ, ಮೇಲಿನ ದಾರಿ ಎಲ್ಲಾ ಬ್ಲಾಕ್ ಆಗಿದೆ, ಇವತ್ತು ರಾತ್ರಿಯಿಡೀ ಮಳೆ ಸುರಿಯುತ್ತೆ ಅನಿಸುತ್ತೆ “ ಅಂದ. ಮತ್ತೆ, “ ನೀವು ಯಾವ ಏರಿಯಾ ಸರ್ ?” ಎಂದು ಪ್ರಶ್ನಿಸಿದ. ಅಘೋಷ್ ವಿಜಯನಗರವೆಂದಾಕ್ಷಣ “ ಇವತ್ತು ನೀವು ಮನೆ ಮುಟ್ಟಿದ ಹಾಗೇ ಸರ್ “ ಎಂದು ಹೆದರಿಸಿಯೂಬಿಟ್ಟ. ಅಘೋಷ್ ಬರೀ ನಕ್ಕು ಮತ್ತೆ ಈ ಮಳೆಗೆ ನಿಂತರೆ ನ್ಯುಮೋನಿಯಾ ಬರುವುದು ಖಂಡಿತ ಎಂದು ಯೋಚಿಸಿ ಕಾರಿನ ಕಡೆ ಹೆಜ್ಜೆ ಹಾಕಿದ. ಅಷ್ಟರಲ್ಲಾಗಲೇ ಪೂರ್ತಿ ಒದ್ದೆ ಮುದ್ದೆಯಾಗಿದ್ದ. ಕಾರಲ್ಲಿ ಕೂತು ಕರ್ಚೀಫಿನಿಂದ ಸ್ವಲ್ಪ ತಲೆ ತಿಕ್ಕಿದಂತೆ ಮಾಡಿ ಸೀಟನ್ನು ಹಿಂದಕ್ಕಾನಿಸಿ ಹಾಗೆಯೇ ಕಣ್ಣು ಮುಚ್ಚಿದ. ಒಂದೇ ಘಳಿಗೆ, ಅಚ್ಚನ್ ನಗುಮುಖ ಕಣ್ಣೆದುರು ಬಂದಂತಾಯ್ತು, ಮತ್ತವರು ತೆರೆದ ಬಾಗಿಲಿನಿಂದ ಹೊರಗೆ ಹೊರಟಂತೆ, ಇವನೆಡೆ ತಿರುಗಿ ನೋಡಿದ ಹಾಗೆ ಭಾಸವಾಯ್ತು, ಛಕ್ಕನೆ ಕಣ್ಣು ಬಿಟ್ಟವನಿಗೆ ಎದುರಿನ ಗಾಡಿ ಹೊರಟದ್ದು ಕಾಣಿಸಿತು. ತಲೆ ಕೊಡಹಿ, ಸೀಟು ಮುಂದಕ್ಕೆಳೆದು ಕಾರನ್ನು ಸ್ಟಾರ್ಟ್ ಮಾಡಿದ. ಒಂದು ಹದಿನೈದು ನಿಮಿಷ ನಿಧಾನಕ್ಕೆ ಹೋಗಿರಬಹುದು, ಇದ್ದಕ್ಕಿದ್ದಂತೆ ಮುಂದಿನ ಗಾಡಿ ನಿಂತು ಹೋಯಿತು, ಇವನು ಬೇರೆ ಏನಾದರೂ ಯೋಚಿಸುವಷ್ಟರಲ್ಲಿ ರಸ್ತೆ ಪೂರ್ತಿ ನೀರು ನಿಂತಿದ್ದು ಕಂಡು ಎದೆ ಜಲ್ಲೆಂದಿತು. ಎರಡೇ ನಿಮಿಷ, ಎದುರಿನ ಕಾರಿನವನು ಇಳಿದದ್ದು ಕಂಡು ಏನಾಗಿರಬಹುದೆಂದು ಊಹಿಸಿ ಅಕ್ಸಿರಲೇಟರ್ ಮೇಲೆ ಕಾಲು ಒತ್ತಲು ಹೋದ, ಆವಾಗಲೇ ತಡವಾಗಿತ್ತು. ಸೈಲೆನ್ಸರ್ ಒಳಗೆ ನೀರು ನುಗ್ಗಿ ಕಾರು ಬಂದಾಗಿ ಒಳಕ್ಕೆ ನೀರು ತುಂಬಲಾರಂಭಿಸಿತು. ಜನರ ಅರಚಾಟ, ಮಾತು ಕತೆಗಳು ಕಿವಿಗೆ ಬಿದ್ದವು. ಮಿತಿ ಮೀರಿದ ಉದ್ವೇಗದಿಂದ ಆಗದು ಎಂದು ಗೊತ್ತಿದ್ದರೂ ಮತ್ತೆ ಮತ್ತೆ ಕಾರನ್ನು ಸ್ಟಾರ್ಟ್ ಮಾಡಲೆತ್ನಿಸಿ ಸೋತು ಹೋದ. ಕೆಳಗಿಳಿದು ಅದನ್ನು ದಬ್ಬುವ ಪ್ರಯತ್ನ ಮಾಡಿದ, ಮೊಣಕಾಲವರೆಗಿದ್ದ ನೀರು ಪೂರ್ತಿ ಗಾಡಿಯೊಳಗೆ ನುಗ್ಗಿತು. ಅಸಹಾಯಕನಾಗಿ ಹಿಂದಿನ ಸೀಟಿನಿಂದ ಬ್ಯಾಗ್ ತೆಗೆದುಕೊಂಡು, ಡಿಕ್ಕಿಯಲ್ಲಿ ಹುಡುಕಾಡಿ, ನೀರು ತುಂಬುವ ಮೊದಲು ಅವನ ಅದೃಷ್ಟಕ್ಕೆ ಸಿಕ್ಕ ಯಾವುದೋ ಮಾಲಿನ ದೊಡ್ಡ ಪ್ಲಾಸ್ಟಿಕ್ ಕವರ್ ನಲ್ಲಿ ಆ ಬ್ಯಾಗ್ ಕವರ್ ಮಾಡಿದ. ತಮ್ಮ ಗಾಡಿ ಬಿಟ್ಟು ಸಿಟ್ಟಲ್ಲಿ, ಸಂಕಟದಲ್ಲಿ ಕಿರುಚುತ್ತಾ ನಿಂತಿದ್ದ ಜನರೊಂದಿಗೆ ತಾನೂ ಒಬ್ಬನಾಗಿ ನಿಂತ. ಕೆಲವರು ಹಟ ಬಿಡದೇ ಗುದ್ದಾಟ ನಡೆಸುತ್ತಲೇ ಹಿಂದೆ ಹೋಗುವ ಪ್ರಯತ್ನ ಮಾಡುತ್ತಲೇ ಇದ್ದರು. ಒಂದಿಬ್ಬರು ಹಿಂದಕ್ಕೆ ಹೋಗುವಲ್ಲಿ ಯಶಸ್ವಿಯಾದರೂ ಅವರ ಹಿಂದಿನ ಗಾಡಿಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಮತ್ತಷ್ಟು ಗೊಂದಲಗಳು, ಕಿರಿಕಿರಿಗಳು ಸೃಷ್ಟಿಯಾಗಿ, ಏನಾದರೂ ಬಿಡುವುದಿಲ್ಲ ಎಂಬಂತೆ ಅರಚುತ್ತಿದ್ದ ಮಳೆಗೆ ಸಾಥ್ ಕೊಟ್ಟವು. 
ಅಸಹಾಯಕತೆ, ಅಕ್ರೋಶದಿಂದ ಕಣ್ಣಲ್ಲಿ ನೀರು ಜಿನುಗುವಂತಾದರೂ ಎಲ್ಲವನ್ನೂ ಅದರದರ ಪಾಡಿಗೆ ಬಿಟ್ಟು ಅಘೋಷ್ ನೀರಲ್ಲಿ ರಸ್ತೆಯನ್ನು ಹುಡುಕುತ್ತಾ ಕಷ್ಟಪಟ್ಟು ಹೆಜ್ಜೆ ಹಾಕಲಾರಂಭಿಸಿದ. ಮೆಟ್ರೋ ಸೇತುವೆ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದಂತೆ ಅದರಡಿಯಲ್ಲಿ ಒಂದಷ್ಟು ಜನರು ರಕ್ಷಣೆ ಪಡೆಯಲು ನಿಂತಿದ್ದರು. ಇವನೂ ಆ ಗುಂಪಲ್ಲಿ ಸೇರಿಕೊಂಡ. ಮನಸ್ಸು ಅಚ್ಚನ್ ಬಗೆಯೇ ಯೋಚಿಸುತ್ತಿತ್ತು, ಎಲ್ಲವನ್ನೂ ಅವರ ಬಳಿ ಹಂಚಿಕೊಂಡರೆ ಸಮಾಧಾನ ಸಿಗುತ್ತದೆ ಅಂದುಕೊಂಡವನಿಗೆ ಫೋನ್ ಕಾರಲ್ಲೇ ಉಳಿದು ಹೋದ ಅರಿವಾಯಿತು. ಎದುರಿನ ಸಿಮೆಂಟಿನ ಕಂಬಕ್ಕೆ ಮುಷ್ಟಿಯಿಂದ ಗುದ್ದುವ ಮನಸ್ಸಾದರೂ ಆ ಭಾವನೆಯನ್ನು ಕಷ್ಟಪಟ್ಟು ತಡೆದುಕೊಂಡ. ಸುಮಾರು ಒಂದು ಗಂಟೆ ಸುರಿದ ನಂತರ ಮಳೆ ತನ್ನ ಹಟ ಬಿಟ್ಟಂತೆ  ಕಡಿಮೆಯಾಗತೊಡಗಿತು. ವಿಜಯನಗರದ ಸ್ಕೈಲೈನ್ ಅಪಾರ್ಟ್ ಮೆಂಟಿನ ತನ್ನ ಗೂಡನ್ನು ಸೇರಲು ಇನ್ನು ಮುಕ್ಕಾಲು ಗಂಟೆಯಾದರೂ ನಡೆಯಬೇಕು, ಆಟೋ ಅಂತೂ ಸಿಗುವ ಅವಕಾಶವಿಲ್ಲ. ಯಾರನ್ನಾದರೂ ಲಿಫ್ಟ್ ಕೇಳಬೇಕಷ್ಟೇ ಅಂದುಕೊಂಡು ನಡುಗುತ್ತಾ, ಹಿಂತಿರುಗಿ ನೋಡುತ್ತಾ, ವಿರಳವಾಗಿ ಹಾದು ಹೋಗುತ್ತಿದ್ದ ವಾಹನಗಳಿಗೆ ಕೈ ತೋರಿಸುತ್ತಾ ಹೆಜ್ಜೆ ಹಾಕತೊಡಗಿದ. ಕೆಲವು ಕಡೆ ರಸ್ತೆಯ ಪಕ್ಕದ ಮೋರಿಗಳು ತುಂಬಿ ಹರಿಯುತ್ತಿದ್ದವು. ಆ ನೀರನ್ನು ನೋಡುತ್ತಾ ನಡೆಯುತ್ತಿದ್ದವನಿಗೆ ಪುಟ್ಟ ಗೊಂಬೆಯೊಂದು ತೇಲಿ ಬಂದಂತನಿಸಿ ನೋಡುತ್ತಾನೆ, ಒಂದು ಪುಟ್ಟ ನಾಯಿಮರಿ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಅದೋ, ಕೈ ಕಾಲು ಬಡಿಯುವ ಪ್ರಯತ್ನ ಮಾಡುತ್ತಾ ಸೋತು ಹೋಗುತ್ತಿತ್ತು. ಮೈ ಕೈ ಗಲೀಜಾಗುವುದನ್ನೂ ಲೆಕ್ಕಿಸದೇ ಕೂಡಲೇ ಹಾರಿ ಅದನ್ನು ಮೇಲಕ್ಕೆತ್ತಿದ ಅಘೋಷ್. ಚಳಿಗೆ ಅದು ಗಡ ಗಡ ನಡುಗುತ್ತಿತ್ತು. ಪಾಪ ಅನಿಸಿ ಆ ಮುಗ್ಧ ಜೀವಿಯ ಮೇಲೆ ಪ್ರೀತಿ, ಕನಿಕರ ಉಕ್ಕಿ ಬಂತು. ಕರ್ಚೀಫಿನಿಂದ ಚೆನ್ನಾಗಿ ಅದನ್ನು ಒರೆಸಿದ, ಗುಂಡು ಗುಂಡಾಗಿದ್ದ ಆ ಮರಿ ಕಣ್ಣೆತ್ತಿ ಅವನನ್ನೊಮ್ಮೆ ಕೃತಜ್ಞತೆಯಿಂದ ನೋಡಿತು. ವಾಪಾಸು ಅದನ್ನು ಕೆಳಕ್ಕೆ ಬಿಡುವ ಮನಸ್ಸಾಗದೇ ತನ್ನ ಕೋಟಿನ ಜಿಪ್ ತೆಗೆದು ಹೊಟ್ಟೆಗಾನಿಸಿ, ಇನ್ನೊಂದು ಕೈಯಲ್ಲಿ ಕವರನ್ನು ನೇತಾಡಿಸಿಕೊಂಡು ಮನೆ ಕಡೆ ಕಾಲೆಳೆದುಕೊಂಡು ಬಂದ.
ಅಪಾರ್ಟ್ ಮೆಂಟ್ ಮುಟ್ಟಿದಾಗ ಗಂಟೆ ಒಂದೂವರೆ. ಸೆಕ್ಯೂರಿಟಿ ಮೈ ತುಂಬಾ ಹೊದ್ದುಕೊಂಡು ಕೂತಲ್ಲೇ ನಿದ್ದೆ ಹೋಗಿದ್ದ. ಈ ಗುಂಡು ನಾಯಿಮರಿಯನ್ನು ಅವನ ಬಳಿ ಬಿಡಬೇಕು ಅಂದುಕೊಂಡವನಿಗೆ, ಈ ಹೊತ್ತಿನಲ್ಲಿ ಅವನನ್ನು ಎಬ್ಬಿಸಲು ಮನವೊಪ್ಪದೆ ಮೂರನೇ ಅಂತಸ್ತಿನ ತನ್ನ ಫ್ಲಾಟಿಗೇ ಕರೆದುಕೊಂಡು ಹೋದ. ಅದಕ್ಕೊಂಚೂರು ಹಾಲು ಬಿಸಿ ಮಾಡಿ ತಟ್ಟೆಯೊಂದಕ್ಕೆ ಹಾಕಿ ತಾನೂ ಹಾಲಿಗೆ ಸ್ವಲ್ಪ ಕಾರ್ನ್ ಫ್ಲೇಕ್ಸ್ ಕಲಿಸಿಕೊಂಡು ತಿಂದ. ಅಚ್ಚನ್ ಗೆ ಹೊಸದಾಗಿ ಬಂದಿದ್ದ ತನ್ನ ಸ್ಥಿರ ದೂರವಾಣಿಯಿಂದ ನಾಳೆ ಕರೆ ಮಾಡಿದರಾಯ್ತು ಎಂದಾಲೋಚಿಸಿ ಮರಿಯನ್ನು ಸೋಫಾ ಮೇಲೆ ಬೆಚ್ಚಗೆ ಮಲಗಿಸಿ ತಾನೂ ಹಾಸಿಗೆಯ ಮೇಲೆ ಬಿದ್ದುಕೊಂಡ. ಅತೀವ ಮಾನಸಿಕ, ದೈಹಿಕ ಆಯಾಸಕ್ಕೆ ನಿದ್ದೆ ಹತ್ತಿದ್ದೇ ತಿಳಿಯಲಿಲ್ಲ. ಬೆಳಗ್ಗೆ ಸಾಕಷ್ಟು ತಡವಾಗಿಯೇ ಎಚ್ಚರಗೊಂಡವನಿಗೆ ನಿನ್ನೆಯ ಪಡಿಪಾಟಲುಗಳು ನೆನಪಿಗೆ ಬರುತ್ತಿದ್ದಂತೆ ಸಣ್ಣಗೆ ತಲೆ ನೋಯಲಾರಂಭಿಸಿತು. ತನ್ನ ಬಾಲದೊಂದಿಗೇ ತಾನೇ ಆಡುತ್ತಿದ್ದ ನಾಯಿಮರಿಯನ್ನು ನೋಡಿದಾಗ ಮನಸ್ಸು ಒಂಚೂರು ಹೌದೋ ಅಲ್ಲವೋ ಎಂಬಂತೆ ಅರಳಿತು. ಬಾಗಿಲು ತೆಗೆದು ಪೇಪರ್, ಹಾಲು ಎತ್ತಿಕೊಳ್ಳುತ್ತಿದ್ದಂತೆ, ಶತಮಾನದ ಮಳೆ, ನೂರು ಸೆ.ಮೀ. ಮಳೆ ಎಂಬೆಲ್ಲಾ ತಲೆ ಬರಹಗಳು ಕಣ್ಣಿಗೆ ರಾಚಿದವು. ಸರ್ವೀಸ್ ಸೆಂಟರ್ ಗೆ ಫೋನ್ ಮಾಡಿ ಕಾರನ್ನು ಟೋ ಮಾಡಲು ಹೇಳಬೇಕು, ಯಾವ ಕಂಡೀಶನ್ ನಲ್ಲಿದೆಯೋ, ಹೊಸ ಕಾರಿಗೆ ಎಷ್ಟಾಗುತ್ತೋ ಎಂಬೆಲ್ಲಾ ಯೋಚನೆಗಳೆಲ್ಲಾ ಆಕ್ರಮಿಸಿ, ರಾಶಿ ಬಿದ್ದ ಅಷ್ಟೂ ಕೆಲಸಗಳನ್ನು ನೆನೆದು ನಿಟ್ಟುಸಿರು ಬಿಟ್ಟ. ಇವನ ನಿಟ್ಟುಸಿರಿಗೋ ಏನೋ, ನಾಯಿಮರಿ ಬಂದು ಅವನ ಕಾಲ ಬಳಿ ನಿಂತಿತು. ಅದನ್ನು ನೋಡಿ, ಅಘೋಷ್ ಸಹಜವೆಂಬಂತೆ ಮಲಯಾಳಂನಲ್ಲಿ “ ಏನೋ ಮರಿ, ನಿದ್ದೆ ಮಾಡಿದೆಯಾ ? ನೋಡು, ನನ್ನ ಕಷ್ಟ, ಸೆಲ್ ಫೋನ್ ಬೇರೆ ಕಾರೊಟ್ಟಿಗೆ ನೀರಲ್ಲಿ ಮುಳುಗಿ ಹೋಯ್ತು. ಏನು ಮಾಡಲಿ, ಸರ್ವೀಸ್ ಸ್ಟೇಷನ್ ಗೆ ಫೋನ್ ಮಾಡೋಣ ಅಂದರೆ ನಂಬ್ರ ಬೇರೆ ಇಲ್ಲ. ನಿನ್ನ ಹಾಗೆ ನಾನಿದ್ದರೆ ಎಷ್ಟು ಅರಾಮಾಗಿರುತ್ತಿತ್ತು “ ಅಂದ. ಅವನು ಮಾತಾಡುತ್ತಿರುವುದನ್ನು ಗಮನವಿಟ್ಟು ಕೇಳುವಂತೆ ಅವನನ್ನೇ ನೋಡುತ್ತಿದ್ದ ಮರಿ ಟೇಬಲ್ ಮೇಲಿಟ್ಟ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿಟ್ಟಿದ್ದ ಅವನ ಬ್ಯಾಗನ್ನು ನೋಡಿ ಮತ್ತೆ ಅವನನ್ನು ನೋಡಿತು. ಅವನ ದೃಷ್ಟಿ ಆ ಕಡೆ ಹರಿದಂತೆ ‘ ಅರೇ, ಹೌದಲ್ಲಾ, ’ ಎಂದುಕೊಂಡು ಮಾಡೆಮ್, ಲ್ಯಾಪ್ ಟಾಪ್ ಎರಡೂ ಆನ್ ಮಾಡಿ ತನ್ನ ಇ - ಮೇಯ್ಲ್ ನಲ್ಲಿ ಲಿಂಕ್ ಮಾಡಿಟ್ಟುಕೊಂಡ ಎಲ್ಲಾ ಫೋನ್ ನಂಬರ್ ಗಳನ್ನೂ ತನ್ನ ಲ್ಯಾಪ್ ಟಾಪ್ ನಲ್ಲಿ ಕಾಪಿ ಮಾಡಿಟ್ಟುಕೊಂಡ. ಸರ್ವೀಸ್ ಸ್ಟೇಷನ್ ಗೆ ಕರೆ ಮಾಡಿ ಕಾರಿನ ಬಗ್ಗೆ ಹೇಳುತ್ತಿದ್ದಂತೆ “ ಹೌದು ಸರ್, ನಿನ್ನೆ ಇಡೀ ಬೆಂಗಳೂರಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಾರುಗಳು ಸಿಕ್ಕಿ ಬಿದ್ದಿವೆ. ನೋಡೋಣ, ಇನ್ಸೂರೆನ್ಸ್ ಏನಾದರೂ ಸಿಗುತ್ತಾ ಅಂತ. ನಾವು ಅಲ್ಲಿಗೆ ಹೋಗಿ ಟೋ ಮಾಡಿ ಎತ್ತಿಕೊಂಡು ಬರುತ್ತೇವೆ, ಆಮೇಲೆ ನಿಮಗೆ ಕರೆ ಮಾಡುತ್ತೇವೆ, ನಿಮ್ಮ ನಂಬರ್ ಕೊಡಿ “ ಎಂದ ಆ ಕಡೆಯ ವ್ಯಕ್ತಿ. 
ಏನೋ ದೊಡ್ಡ ಕೆಲಸ ಮುಗಿಸಿದಂತೆ ಸಮಾಧಾನವಾಯ್ತು ಅವನಿಗೆ, ಪುಣ್ಯಕ್ಕೆ ಅಂದು ಶನಿವಾರವಾದ್ದರಿಂದ ಇನ್ನೆರಡೂ ದಿನ ಆಫೀಸಿಗೆ ಹೋಗುವ ತಲೆನೋವಿಲ್ಲ ಅಂದುಕೊಂಡ. ನಾಯಿಮರಿ ಕೊಟ್ಟ ಉಪಾಯವಿದು ಅನಿಸಿ ಅದರ ಕಡೆ ತಿರುಗಿ “ ಥ್ಯಾಂಕ್ಸ್ ಮರಿ “ ಎಂದ. ಅದು ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದದ್ದು ಎದ್ದು ಪರವಾಗಿಲ್ಲ ಎಂಬಂತೆ ಅಡ್ಡಡ್ಡ ತಲೆಯಾಡಿಸಿತು. ‘ಅರೇ ಇವನಿಗೆ ನಾ ಮಾತಾಡಿದ್ದೆಲ್ಲಾ ಅರ್ಥವಾಗುತ್ತಿದೆಯಲ್ಲ’ ಎಂದುಕೊಂಡ ಅಘೋಷ್ ಅದನ್ನೇ ನೋಡುತ್ತಾ. ಅವನನ್ನೇ ನೋಡುತ್ತಿದ್ದ ಅದು, ‘ ನೀನು ಮಾತನಾಡದಿದ್ದರೂ ಅರ್ಥವಾಗುತ್ತದೆ’ ಎಂದು ನಕ್ಕು ಹೇಳಿದಂತೆ ಭಾಸವಾಯಿತು. ತನ್ನ ಭ್ರಮೆ ಎಂಬಂತೆ ತಲೆ ಕೊಡಹಿದವನು ಎದ್ದು ಅದರ ಬಳಿ ಸಾಗಿ ಅದರ ತಲೆ ಸವರಿ ‘ ಇವನಿಗೆ ಏನು ಹೆಸರಿಡೋದು? ಇವನ ಬಣ್ಣ ನೋಡಿದರೆ ರಸ್ಟ್ ಹಿಡಿದ ಕಬ್ಬಿಣದ ಹಾಗಿದ್ದಾನೆ, ರಸ್ಟೀ ಅಂತಲೇ ಕರಿತೀನಿ’, “ ಏನೋ ಮರಿ, ನಿಂಗೆ ಓಕೆನಾ ರಸ್ಟೀ ಹೆಸರು ? “ ಅಂದ. ಅದು ಆಯ್ತು ಎಂಬಂತೆ ತಲೆಯಾಡಿಸಿ ಅವನ ಕೈ ನೆಕ್ಕಿ ತನ್ನೊಪ್ಪಿಗೆ ಸೂಚಿಸಿತು. ಅಘೋಷ್ ಗೆ ನಂಬಲಾಗಲಿಲ್ಲ. ‘ ನಿಂಗೆ ನಿಜವಾಗಿಯೂ ಅರ್ಥವಾಗ್ತಿದೆಯೇನೋ?’ ಎಂದು ಮನದಲ್ಲೇ ಅಂದುಕೊಂಡ. ‘ಇನ್ನೂ ನನ್ನನ್ನು ನಂಬಲ್ವಾ ’ ಎಂದಂತಾಯ್ತು ಅದು ಕಣ್ಣೊಳಗೆ ಕಣ್ಣಿಟ್ಟು. ಖುಷಿ ಮತ್ತು ತನ್ನ ಮನಸ್ಥಿತಿಯ ಬಗ್ಗೆ ಭಯ ಎರಡೂ ಒಟ್ಟೊಟ್ಟಿಗಾಯ್ತು. ಅಚ್ಚನ್ ಗೆ ಹೇಳಬೇಕೆನಿಸಿತು, ಕರೆ ಮಾಡಿದರೆ ಹೋಗುತ್ತಿಲ್ಲವೆಂದಾದರೆ ಬಹುಶಃ ಫೋನ್ ಡೆಡ್ ಆಗಿರಬೇಕು, ಸೆಲ್ ಫೋನ್ ಕೊಟ್ಟರೆ ಅದನ್ನು ಒಂದು ದಿನ ಕೂಡ ಉಪಯೋಗಿಸದೇ ಕಪಾಟಿನಲ್ಲಿಟ್ಟು ಬೀಗ ಹಾಕಿಟ್ಟಿದ್ದಾರೆ ಈ ಅಚ್ಚನ್ ಅಂದುಕೊಂಡು ರಾತ್ರಿ ಮತ್ತೊಮ್ಮೆ ಮಾಡಿದರಾಯ್ತು, ನೋಡೋಣ ಎಂದುಕೊಂಡ. ರಸ್ಟೀಗೆ ನನ್ನ ಆಲೋಚನೆ ಅರ್ಥವಾಗಿದೆಯಾ ಎಂದು ಅದರ ಕಡೆ ನೋಡಿದರೆ ಅದು ತನ್ನ ಪಾಡಿಗೆ ತಾನು ನೆಲದಲ್ಲಿ ಉರುಳಾಡುತ್ತಿತ್ತು. ಎರಡೂ ದಿನ ಹೊರಗೆಲ್ಲೂ ರಸ್ಟೀಯೊಂದಿಗೆ ಕಳೆದ ಅಘೋಷ್ ಅದನ್ನು ಅಪರಿಮಿತವಾಗಿ ಹಚ್ಚಿಕೊಂಡ. ಭಾನುವಾರ ಸಂಜೆಯಾಗುವ ಹೊತ್ತಿಗೆ ಅವರೀರ್ವರ ನಡುವೆ ಹೇಳಲಾಗದ ಬಂಧವೇರ್ಪಟ್ಟಿತ್ತು. ಅವನ ಅಪಾರ್ಟ್ ಮೆಂಟಿನಲ್ಲಿ ಯಾವುದೇ ರೀತಿಯ ಸಾಕುಪ್ರಾಣಿಗಳನ್ನು ಇಟ್ಟುಕೊಳ್ಳುವುದ್ದಕ್ಕೆ ಅವಕಾಶವಿರಲಿಲ್ಲ. ಹಾಗಾಗಿ ರಸ್ಟೀಯನ್ನು ಬಿಡಲಾಗದೇ ಜೀವನದಲ್ಲಿ ಪ್ರಪ್ರಥಮ ಬಾರಿಗೆ ಅಘೋಷ್ ಎಲ್ಲರಿಂದ ಅದರ ಬಗ್ಗೆ ಮುಚ್ಚಿಡುವುದಾಗಿ ಯೋಚಿಸಿದ. ಅದನ್ನು ರಸ್ಟೀಗೆ ಹೇಳಿದ ಕೂಡಾ. 
ಕಾರು ರಿಪೇರಿಗೆ ಮೀರಿ ಹಾಳಾಗಿರಬಹುದೆಂದು ಆತಂಕ ವ್ಯಕ್ತಪಡಿಸಿದ ಸರ್ವೀಸ್ ಸೆಂಟರಿನವರು ಇನ್ನೆರಡು ವಾರವಾದರೂ ಸಮಯಾವಕಾಶ ಕೊಡಲು ಕೇಳಿಕೊಂಡರು. ಹೀಗಾಗಿ ಅಘೋಷ್ ಟ್ಯಾಕ್ಸಿಯ ಮೇಲೆ ಅವಲಂಬಿತನಾಗುವುದು ಅನಿವಾರ್ಯವಾಯಿತು. ಸಧ್ಯದ ಪರಿಸ್ಥಿತಿಗೆಂದು ಒಂದು ಸಾಮಾನ್ಯ ಸೆಲ್ ತೆಗೆದುಕೊಂಡ, ಯಥಾಪ್ರಕಾರ ಅಚ್ಚನ್ ಮಾತಿಗೆ ಸಿಗಲಿಲ್ಲ. ಆಫೀಸಿಗೆ ಹೋಗುವಾಗ ರಸ್ಟೀಗೆ ಬೆಳಗ್ಗಿನ, ಮಧ್ಯಾಹ್ನದ, ಸಂಜೆಯ ತಿಂಡಿಗಳನ್ನು ವಿಂಗಡಿಸಿ ಇಟ್ಟು ಹೋದರೆ ಅವನದನ್ನು ನೀಟಾಗಿ ತಿನ್ನುತ್ತಿದ್ದ. ಉಪಯೋಗಿಸದೇ ಇದ್ದ ಇನ್ನೊಂದು ಟಾಯ್ಲೆಟ್ಟಿನಲ್ಲಿ ಪೇಪರ್ ಹಾಸಿ ಇಟ್ಟರೆ ಅವನೆಲ್ಲಾ ಕೆಲಸ ಮುಗಿಸಿ ಬರುತ್ತಿದ್ದ ಹಾಗೂ ಅವನೆಂದೂ ಬೊಗಳುತ್ತಿರಲಿಲ್ಲ. ಅವನಿಗಾಗಲೇ ಒಂದು ಬುಟ್ಟಿ ತುಂಬಾ ಅವನದೇ ಆಟದ ಸಾಮಾನುಗಳನ್ನು ಎಲ್ಲೆಡೆ ಹುಡುಕಾಡಿ ತಂದಿಟ್ಟಿದ್ದ ಅಘೋಷ್. ತನಗಿಷ್ಟ ಬಂದ ಕಡೆ ಓಡಾಡುತ್ತಾ, ಮಲಗಿ, ಎದ್ದು, ತಿಂದುಕೊಂಡು ಆಟವಾಡಿಕೊಂಡು, ಆರಾಮಾಗಿದ್ದ ರಸ್ಟೀ. ಈ ಇಬ್ಬರ ಸ್ನೇಹ ಮೂರನೆಯವರಿಗೆ ತಿಳಿಯುವ ಅವಕಾಶ ಬರದಂತೆ ಇಬ್ಬರೂ ಎಚ್ಚರ ವಹಿಸುತ್ತಿದ್ದರು. ಅಘೋಷ್ ಆಫೀಸಿನಿಂದ ಮನೆಗೆ ಬಂದು ಕಾಫೀ ಮಾಡಿಕೊಂಡು ಅಡುಗೆ ಮಾಡಿ ತಿಂದು ಮಲಗುವವರೆಗೂ ಅವರೀರ್ವರ ಮೂಕ ಸಂಭಾಷಣೆ ನಡೆಯುತ್ತಿರುತ್ತಿತ್ತು. ಆವಾಗವಾಗ ಅಚ್ಚನ್ ಗೆ ಕರೆ ಮಾಡುತ್ತಿದ್ದ ಅಘೋಷ್, ಕರೆ ಸಿಗದೇ ಅವರೊಂದಿಗೆ ಮಾತಾಡುವುದನ್ನು ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತಿದ್ದ. ಮರುಕ್ಷಣವೇ ರಸ್ಟೀ ಬಂದು ಅವನ ಕೈಗೆ ಫ್ರಿಸ್ಕ್ ಬೀಯೋ, ಹಗ್ಗದ ಆಟದ ಸಾಮಾನೋ ಕೊಟ್ಟು ಆಟಕ್ಕೆ ಎಳೆಯುತ್ತಿತ್ತು. ‘ಕಾರು ರೆಡಿಯಾದರೆ ಊರಿಗೆ ಹೋಗಬೇಕು, ಬೆಳಿಗ್ಗೆ ಬೆಳಿಗ್ಗೆ ಹೋಗೋಣ, ಕಾರಿನವರೆಗೆ ನಿನ್ನ ಬಾಸ್ಕೆಟ್ ಆಲ್ಲಿ ಹಾಕ್ಕೊಂಡು ಹೋಗ್ತೀನಿ, ನಿನ್ನ ನೋಡಿದರೆ ಅಚ್ಚನ್ ಎಷ್ಟು ಖುಷಿ ಪಡುತ್ತಾರೆ ಗೊತ್ತಾ ?’ ಎಂದೆಲ್ಲಾ ಹೇಳುತ್ತಿದ್ದ. ಅಚ್ಚನ್ ಬಗ್ಗೆ ಅದಕ್ಕೆ ಹೇಳಿದರೆ ಕಣ್ಣರಳಿಸಿ ಕೇಳುತ್ತಿತ್ತೇ ಹೊರತು ಏನೂ ಭಾವನೆಗಳನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಆವಾಗೆಲ್ಲಾ ‘ನಿಂಗೆ ಹೊಟ್ಟೆಕಿಚ್ಚು ಮರಿ’ ಎಂದು ಅಘೋಷ್ ನಕ್ಕು ಬಿಡುತ್ತಿದ್ದ. ರಸ್ಟೀ ಸಿಕ್ಕಿದ ದಿನ, ಮೇ ೩೧. ಅದನ್ನು ಕ್ಯಾಲೆಂಡರಿನಲ್ಲಿ ಗುರುತು ಮಾಡಿಟ್ಟುಕೊಂಡಿದ್ದ ಅಘೋಷ್.
ಅಂದು ಜೂನ್ ೫ನೇ ತಾರೀಕು. ಆಫೀಸು ಮುಟ್ಟಿದ್ದಾನಷ್ಟೆ. ಅವನ ಹೆಸರಿಗೊಂದು ಫೋನ್ ಬಂತು, ಆಶ್ಚರ್ಯದಿಂದಲೇ ಆ ಕರೆ ಸ್ವೀಕರಿಸಿದವನು ಆ ಕಡೆಯ ವ್ಯಕ್ತಿ ಮಾತನಾಡಿದ್ದು ಕೇಳುತ್ತಿದ್ದಂತೆ ಪ್ರಜ್ಞಾಶೂನ್ಯನಾಗಿ ಕೆಳಗೆ ಬಿದ್ದು ಬಿಟ್ಟ. ಸುಮಾರು ೧೦-೧೫ ನಿಮಿಷದ ನಂತರ ಅವನು ಕಣ್ಣು ಬಿಟ್ಟಾಗ ಅವನ ಸುತ್ತ ಅವನ ಟೀಮಿನ ಎಲ್ಲರೂ ನಿಂತಿದ್ದರು. ಬಿದ್ದು ಮೈ ಕೈ ನೋಯಿಸಿಕೊಂಡವನಿಗೆ ಅವರ ಸಹಾನುಭೂತಿ, ಅನುಕಂಪದ ನೋಟಗಳಿಂದ ಇನ್ನಷ್ಟು ನೋವಾಯಿತು. ಮೇ ೩೧ರ ಸಾಯಂಕಾಲವೇ ಅವನ ಅಚ್ಚನ್ ಇನ್ನಿಲ್ಲವಾಗಿದ್ದರು. ಅಷ್ಟೂ ದಿನಗಳು ಅವನ ಸೆಲ್ ಫೋನಿಗೆ ಕರೆ ಮಾಡುವ ಪ್ರಯತ್ನವನ್ನು ಲಾಯರ್ ಕೃಷ್ಣಕಾಂತ್ ಹಾಗೂ ಫಾರ್ಮ್ ಹೌಸಿನ ಕೆಲಸದಾಳುಗಳು ಮಾಡಿದ್ದರು. ಅವನ ಹೊಸ ಸ್ಥಿರ ದೂರವಾಣಿಯ ನಂಬರ್ ಅಚ್ಚನ್ ಬರೆದುಕೊಂಡಿರಲಿಲ್ಲವಾದದ್ದರಿಂದ ಹಾಗೂ ಅಲ್ಲಿನ ದೂರವಾಣಿಗಳು ಅಂದು ರಾತ್ರಿ ಸುರಿದ ಭಾರೀ ಮಳೆಗೆ ನಿಷ್ಕ್ರಿಯಗೊಂಡದ್ದರಿಂದ ಅವನನ್ನು ತಲುಪುವ ಯಾವ ಪ್ರಯತ್ನಗಳೂ ಯಶಸ್ವಿಯಾಗಿರಲಿಲ್ಲ. ಅವನಿದ್ದೂ, ಅವರ ಅಂತ್ಯಕ್ರಿಯೆಯನ್ನು ಬೇರಾರೋ ನಿಂತು ಮಾಡಿದ್ದರು, ಅವರ ಕೊನೇ ಸರ್ತಿ ನೋಡುವ ಅವಕಾಶವನ್ನೂ ವಿಧಿ ಮಾಡಿಕೊಟ್ಟಿರಲಿಲ್ಲ. ಕೊನೆಗೆ ಲಾಯರ್ ಅತೀ ಕಷ್ಟಪಟ್ಟು ಯಾರ ಮುಖಾಂತರವೋ ಅವನಿದ್ದ ಕಂಪೆನಿಯ ಹೆಸರನ್ನು ಪತ್ತೆ ಹಚ್ಚಿ ಕರೆ ಮಾಡಿದ್ದರು. 
ಯಾರೋ ಅದಾಗಲೇ ಅವನಿಗೋಸ್ಕರ ಟ್ಯಾಕ್ಸಿ ಬುಕ್ ಮಾಡಿದ್ದರು. ಅನಾಥ ಭಾವದಿಂದ, ಹತಾಶೆಯಿಂದ ಪೂರ್ತಿ ಕುಸಿದು ಹೋಗಿದ್ದವನಿಗೆ ಮನೆಗೆ ಹೋಗಿ ರಸ್ಟೀಯನ್ನೂ ಕರೆದುಕೊಂಡು ಹೋಗಬೇಕೆನಿಸಿತು ಆ ಕ್ಷಣಕ್ಕೆ. ತನ್ನ ವಿಳಾಸ ಹೇಳಿ ಕರ್ಚೀಫಿನಿಂದ ಮುಖ ಮುಚ್ಚಿ ಕುಳಿತುಕೊಂಡ. ಮನೆ ಮುಟ್ಟುತ್ತಿದ್ದಂತೆ ರಸ್ಟೀಯನ್ನು ಕರೆದ. ಬಾಗಿಲ ಶಬ್ದ ಕೇಳುತ್ತಿದ್ದಂತೆ ಓಡಿ ಬರುತ್ತಿದ್ದವನು ಇಂದು ಮನೆಯಿಡೀ ಕಾಣಲಿಲ್ಲ. ಅವನ ಆಟದ ಸಾಮಾನುಗಳು ಎಂದಿನಂತೆ ಮನೆ ತುಂಬಾ ಹರಡಿದ್ದವು. ಪದೇ ಪದೇ ಅವನ ಹೆಸರು ಕರೆಯುತ್ತಾ ರೂಮಿಂದ ರೂಮಿಗೆ ಓಡಾಡತೊಡಗಿದ. ಮೊದಲೇ ಪ್ರೀತಿಸುವ ಒಂದು ಜೀವವನ್ನು ಕಳೆದುಕೊಂಡವನಿಗೆ ರಸ್ಟೀ ಕಾಣದೇ ಈಗ ಪೂರ್ತಿ ಹುಚ್ಚು ಹಿಡಿದಂತಾಯ್ತು. ಕೊನೆಗೆ ವಾರ್ಡ್ ರೋಬಿನಲ್ಲಿ ಅಡಗಿ ಕೂತಿರಬಹುದು ಎಂದವನಿಗೆ ಅಲ್ಲೂ ಕಾಣಲಿಲ್ಲ, ಆದರೆ ಅಲ್ಲಿ ಪೋಸ್ಟಲ್ ಡಿಪಾರ್ಟ್ ಮೆಂಟಿನಿಂದ ಬಂದ ದೊಡ್ಡ ಕವರೊಂದು ಕಾಣಿಸಿತು ಮತ್ತು ಅದರ ಮೇಲೆ ರಸ್ಟೀಯ ಕಾಲ ಗುರುತುಗಳೂ ಇದ್ದವು. ಕುತೂಹಲದಿಂದ ಅದನ್ನು ತೆರೆದವನಿಗೆ ಕಂಡದ್ದು ಅಚ್ಚನ್ ಬರೆದಿಟ್ಟಿದ್ದ ವಿಲ್, ಇಡೀ ಆಸ್ತಿಯನ್ನು ಅವನ ಹೆಸರಿಗೆ ಬರೆದಿದ್ದರು. ಅದನ್ನು ನೋಡುತ್ತಿದ್ದಂತೆ ದುಃಖ ಉಮ್ಮಳಿಸಿ ಬಂತು. ಕುಸಿದು ಕುಳಿತು ಜೋರಾಗಿ ಕಿರುಚಿ ಅಳಲಾರಂಭಿಸಿದ. ಅಳುತ್ತಿದ್ದವನು ಇದ್ದಕ್ಕಿದ್ದ ಹಾಗೆ ನಿಲ್ಲಿಸಿ ಕವರ್ ಮೇಲಿನ ತಾರೀಕು ನೋಡಿದ. ಅದು ಮನೆಗೆ ಬಂದದ್ದು ಜೂನ್ ೩ನೇ ತಾರೀಕು, ಸೋಮವಾರ. 
ಹೊರಗೋಡಿ ಅಕ್ಕಪಕ್ಕದ ಮನೆಗಳ ಬಾಗಿಲು ಬಡಿದು “ರಸ್ಟೀಯನ್ನು ನೋಡಿದಿರಾ, ಒಂದು ನಾಯಿ ಮರಿ, ರಸ್ಟ್ ಹಿಡಿದ ಕಬ್ಬಿಣದ ಹಾಗಿತ್ತು, ಅವನಿಗೆ ಮಾತಾಡಿದ್ದೆಲ್ಲಾ ಅರ್ಥವಾಗುತ್ತಿತ್ತು “ ಎಂದೆಲ್ಲಾ ಬಡಬಡಿಸತೊಡಗಿದ. ಅವನ ಗಲಾಟೆಗೆ ಅಪಾರ್ಟ್ ಮೆಂಟಿನ ಜನರೆಲ್ಲಾ ಗುಂಪುಗೂಡಿ ಅವನನ್ನು ವಿಚಿತ್ರವಾಗಿ ನೋಡತೊಡಗಿದರು. ಒಂದಿಬ್ಬರು “ ನಾಯಿನಾ?, ಅಪಾರ್ಟ್ ಮೆಂಟ್ ರೂಲ್ಸ್ ಗೊತ್ತಿಲ್ಲ್ವಾ ?, ಈಯಪ್ಪಂಗೆ ತಲೆ ಕೆಟ್ಟಿರಬೇಕು “ ಎಂದಾಡಿಕೊಳ್ಳತೊಡಗಿದರು. ಮಾತನಾಡಿ ಪ್ರಯೋಜನವಿಲ್ಲದಾಗ ಅಘೋಷ್ ಮೂಕನಾದ, ಕಣ್ಣಲ್ಲಿ ಅಚ್ಚನ್ ಮತ್ತು ರಸ್ಟೀ ಬಿಂಬ ತುಂಬತೊಡಗಿತು. ಅಷ್ಟರಲ್ಲಿ ಸೆಕ್ಯೂರಿಟಿಯೊಡನೆ ಮೇಲೆ ಬಂದ ಟ್ಯಾಕ್ಸಿ ಡ್ರೈವರ್, “ ಏನ್ಸಾರ್, ಕಾದೂ ಕಾದೂ ಸಾಕಾಯ್ತು. ಅದೆಲ್ಲೋ ಕೇರಳಕ್ಕೆ ಹೋಗಬೇಕು ನೀವು ಅಂದ್ರು ನಿಮ್ಮಾಫೀಸಿನವರು, ಬರ್ತೀರಾ ಇಲ್ವಾ “ ಎಂದ. ಮಂಜಾದ ಕಣ್ಣೊರೆಸಿಕೊಂಡ ಅಘೋಷ್ “ ಬರ್ತೀನಿ, ನಡೀರಿ “ ಎಂದುಸುರಿದ. 

Published in Vishwavani Viraama on 24/07/16

Saturday, May 21, 2016

ಬೊಂಬೆ

 ಈ ಕಥೆ ಯುಗಾದಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದಿದೆ.

ಪದಬಂಧ ಬಿಡಿಸುತ್ತಾ ಜಗಲಿ ಮೇಲೆ ಕೂತಿದ್ದ ಪೂರ್ಣಿಮಾ ಗೇಟಿನ ಸದ್ದಿಗೆ ತಲೆಯೆತ್ತಿದರೆ ಗೌರಿ ದನ ಬಂದು ನಿಂತಿದ್ದಾಳೆ, ' ಯಾವಾಗಲೂ ಸಂಜೆ ಅಕ್ಕಚ್ಚಿಗಾಗಿ ಬರುವವಳು  ಈವಾಗಲೇ ಬಂದಿದ್ದಾಳೆ್,  ನೀರಡಿಕೆಯಾಗಿರಬೇಕು' ಎಂದುಕೊಂಡು ಮನೆಯ ಎಡಪಾರ್ಶ್ವಕ್ಕಿದ್ದ, ನಳದ ಬಳಿ ನಡೆದು, ಬಕೆಟಿನಲ್ಲಿ ನೀರು ತಂದಳು. ಬಕೀಟು ನೋಡುತ್ತಿದ್ದಂತೆ, ಕುತ್ತಿಗೆ ಕೊಂಕಿಸಿ, ಬಾಲವನ್ನಾಡಿಸುತ್ತ ಆತುರ ತೋರಿಸಿದ ಗೌರಿ, ಬಕೇಟು ಕೆಳಗಿಳಿಸುವ ಮೊದಲೇ ಮೂತಿಯನ್ನು ನುಗ್ಗಿಸಿ ಶಬ್ದ ಮಾಡಿಕೊಂಡು ನೀರು ಕುಡಿಯತೊಡಗಿದಳು. ನೋಡುತ್ತಾ ನಿಂತವಳಿಗೆ ಬಿಸಿಲಿನ ಝಳ ತಟ್ಟಿತು. ' ಬೀದರಿನ ಬಿಸಿಲು ಅಂದರೆ ಸಾಮಾನ್ಯವೇ? ಎಂದುಕೊಳ್ಳುತ್ತಾ  ಮುಖ ಒರೆಸಿಕೊಳ್ಳುತ್ತಿದ್ದವಳ ಕಣ್ಣು  ರಸ್ತೆಯಂಚಿಗೆ ನಿಂತಿದ್ದ ತಗಡಿನ ಶೀಟು ಹೊದೆಸಿದ್ದ ರಾಮಲಕ್ಷ್ಮಿಯ ಮನೆಯ ಕಡೆ ಹರಿಯಿತು. ಆರು ತಿಂಗಳುಗಳೇ ಕಳೆಯಿತಲ್ಲಾ ಎಂದು ನಿಟ್ಟುಸಿರುಬಿಟ್ಟ ಪೂರ್ಣಿಮಾ , ಖಾಲಿಯಾಗಿದ್ದ ಬಕೆಟನ್ನೆತ್ತಿ ಹೊರಟಳು.

ಆಗಲೇ ಪುಟ್ಟ ಬರುವ ಸಮಯವಾಗಿತ್ತು, ಬಂದ ಕೂಡಲೇ ಅವನ ಬಡಬಡಕ್ಕೆಲ್ಲಾ ಅನ್ಯಮನಸ್ಕಳಾಗಿ ಹೂಂಗುಟ್ಟಿದಳು. ಅಮ್ಮ ಇವತ್ತ್ಯಾಕೆ ಹೀಗಿದ್ದಾಳೆ ಎಂದು ಪುಟ್ಟ ಕೇಳಿಯೂ ಬಿಟ್ಟ,  ಏನಿಲ್ಲ ಅಂದಳಷ್ಟೇ. ತನ್ನಷ್ಟಕ್ಕೆ ಊಟ ಮಾಡುತ್ತಾ ಡೋರೆಮಾನ್ ನೋಡುತ್ತಾ ಕುಳಿತ. ಅರ್ಧಕ್ಕೆ ಬಿಟ್ಟ ಪದಬಂಧವನ್ನು ಮಾಡುತ್ತಾ ಕುಳಿತವಳಿಗೆ ಹಿಂದಿದ್ದೆಲ್ಲಾ ನೆನಪು.

ಎರಡೂವರೆ ವರ್ಷದ ಹಿಂದೆ, ನಾಲ್ಕು ವರ್ಷದ ಪುಟ್ಟನನ್ನು ಕರೆದುಕೊಂಡು ದೂರದ ಪುತ್ತೂರು ಬಿಟ್ಟು ಕರ್ನಾಟಕದ ತುಟ್ಟತುದಿಯ ಬೀದರಿಗೆ ಬಂದವಳಿಗೆ ಅತೀ ಬಿಸಿಲು, ಅತೀ ಚಳಿ, ಒಡೆಯುವ ಮೈ, ಕಪ್ಪು ಮಣ್ಣು, ಧೂಳು ಎಲ್ಲವೂ ಹೊಸದು. ಗಂಡ ಚಿದಾನಂದ ಸೀನಿಯರ್ ಸಿವಿಲ್ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದರಿಂದ ಮೂರು ವರ್ಷಗಳಿಗೊಮ್ಮೆ ಗಂಟುಮೂಟೆ ಕಟ್ಟಿ ಹೊರಡುವುದು ಇಷ್ಟವಿಲ್ಲದಿದ್ದರೂ ಅನಿವಾರ್ಯ ಕರ್ಮವಾಗಿತ್ತು. 
ದತ್ತ ಮಹಾರಾಜ್ ಕಾಲನಿಯಲ್ಲಿ ಮನೆ ಹಿಡಿದ ಚಿದಾನಂದನಿಗೆ ಕೋರ್ಟ್ ೮ ನಿಮಿಷದ ಹಾದಿಯಾದರೆ ಪುಟ್ಟನ ಜ್ಞಾನಸುಧಾ ಶಾಲೆಗೆ ೨೦ ನಿಮಿಷ. ಎದುರು ಮನೆಯ ನಿರ್ಮಲ ಆಂಟಿ, ಪಕ್ಕದ ಮನೆಯ ಮರಾಠಿ ಮಾತನಾಡುವ ಶೀಲಾ, ದೊಡ್ಡ ಗೇಟಿನ ಮನೆಯ ಪ್ರಮೀಳಾ ಆಂಟಿ, ಅವರ ಮಗಳು ಬಬಿತಾ ಎಲ್ಲರೂ ಪರಿಚಯವಾದರು. "ಓ, ಮಂಗಳೂರು ಕಡೆಯವರೇನ್ರೀ, ನಿಮ್ಮ್ ಕಡಿ ಭಾಳಾ ಶೆಕೆ ರೀ, ನೀವೂನೂ ಕೊಬ್ರಿ ಎಣ್ಣೆ ಬಳಸ್ತೀರೆನ್ರಿ ಮತ್ತೆ, ನಿಮ್ಮ್ ಸಾಂಬಾರ್, ಸಾರು ಮಸ್ತ್ ಇರ್ತದ " ಎನ್ನುತ್ತಾ ಇವಳಿಗೆ ಮಾರ್ಕೆಟ್, ಹೊಸದಾಗಿ ಪ್ರಾರಂಭವಾದ ಬಿಗ್ ಬಜಾರ್, ಕಿರಾಣಿ ಅಂಗಡಿ, ಕಿಲಾ, ಬಿದರಿ ಕಲೆ, ಗುರುದ್ವಾರ, ನಾನಕ್ ಝರಣಿ ಎಲ್ಲವನ್ನೂ ಪರಿಚಯಿಸಿದರು. "ಮನೆಕೆಲಸಕ್ಕೆ ಬಾಯಿ ಬೇಡೆನ್ ?" ಎಂದು ಪ್ರಮೀಳಾ ಆಂಟಿಯೇ ಅವರ ಮನೆಗೆ ಬರುವ ರಾಮಲಕ್ಷ್ಮಿಯನ್ನು ಕರ್ಕೊಂಡು ಬಂದು ಮಾತನಾಡಿ  ಸಂಬಳವನ್ನೂ ನಿಗದಿಪಡಿಸಿದಾಗ ಚೌಕಾಶಿ ಗೊತ್ತಿಲ್ಲದ ಪೂರ್ಣಿಮಾಳಿಗೆ ಮನಸ್ಸು ಹಗುರಾಗಿತ್ತು.

ಹಾಗೆ ಮನೆಗೆ ಬಂದ ಮದನಪಲ್ಲಿ ಸತ್ಯ ಸಾಯಿ ರಾಮಲಕ್ಷ್ಮಿ ತೆಲುಗು ಮಿಶ್ರಿತ ಕನ್ನಡ ಮಾತನಾಡುತ್ತಾ, ಮನೆಯಿಡೀ ತನ್ನದೇ ಎಂಬಂತೆ ಕೆಲಸ ಮಾಡುತ್ತಾ ಪೂರ್ಣಿಮಾಳಿಗೆ ಹತ್ತಿರವಾಗುತ್ತಾ ಹೋದಳು. ಯಾವಾಗೆಂದರೆ ಆವಾಗ ರಜೆ ಹಾಕಿ ಮಾಯವಾಗುತ್ತಿದ್ದ ರಾಮಲಕ್ಷ್ಮಿ ವಾಪಸು ಬರುವವರೆಗೂ ಪೂರ್ಣಿಮಾಳಿಗೆ ಸಾಕುಬೇಕಾಗುತ್ತಿತ್ತು. ಹೆಚ್ಚಾಗೆ ತಂದ ದಿನಸಿ ಸಾಮಾನುಗಳು, ತರಕಾರಿಗಳು, ಊರಿನಿಂದ ತಂದೆ ಕೊರಿಯರ್ ಮಾಡುತ್ತಿದ್ದ ತಿಂಡಿ ತಿನಿಸುಗಳು, ಸಾರಿನ ಪುಡಿ ಎಲ್ಲದರಲ್ಲೂ ರಾಮಲಕ್ಷ್ಮಿಗೆ ಪಾಲಿರುತ್ತಿತ್ತು. ಅವಳ ತಿಂಗಳ ದಿನಗಳಲ್ಲಿ ಹೊಟ್ಟೆ ನೋವಿನಿಂದ ಒದ್ದಾಡುವಾಗೆಲ್ಲಾ ಊರಿನಿಂದ ತಂದ ಚಂದ್ರಪ್ರಭಾ ವಟಿಯನ್ನು ಬಲವಂತವಾಗಿ ನುಂಗಿಸುತ್ತಿದ್ದಳು. ಯಾವುದೇ ಎಕ್ಸಿಬಿಷಿನ್ನಿಗೆ ಹೋದರೂ   ಮಣಿ ಸರ, ಮಕ್ಕಳಿಗಾಗಿ ಆಟಿಕೆಗಳನ್ನು ತರುವುದನ್ನು ಪೂರ್ಣಿಮಾ ಮರೆಯುತ್ತಿರಲಿಲ್ಲ. ಚಿದಾನಂದನ ಕಣ್ಣು ತಪ್ಪಿಸಿಯೇ ಅವಳು ಇದನ್ನೆಲ್ಲಾ ಮಾಡಬೇಕಿತ್ತು. ಅವಳ ಈ ಸ್ವಭಾವವನ್ನು ಅತಿಯಾಗಿ ದ್ವೇಷಿಸುತ್ತಿದ್ದ ಚಿದಾನಂದ, "ಯಾರನ್ನು ಎಲ್ಲಿಡಬೇಕೋ ಅಲ್ಲಿಡಬೇಕು, ಅತೀ ಸಲಿಗೆ ನೀ ಕೊಡೋದು ನೋಡಿದ್ರೆ ಮೈಯೆಲ್ಲಾ ಉರಿಯುತ್ತೆ, ಒಳ್ಳೆಯವಳು ಅನಿಸಿಕೊಳ್ಳೊ ಚಟ ನಿಂಗೆ" ಎಂದೆಲ್ಲಾ ಚುಚ್ಚುತ್ತಿದ್ದ. ಆವಾಗೆಲ್ಲ ಅವಳ ಮುಖ ಬಾಡಿದರೂ, ತುಸು ವೇಳೆಯಲ್ಲೇ, ಸಂಜೆ ಬರುವ ಬೀಡಾಡಿ ದನ ಗೌರಿಗಾಗಿ ಅನ್ನ ಬಸಿದ ನೀರು, ತರಕಾರಿ, ಹಣ್ಣಿನ ಸಿಪ್ಪೆಗಳನ್ನು ಎತ್ತಿಡುವುದರಲ್ಲಿ ಮಗ್ನಳಾಗುತ್ತಿದ್ದಳು. ಅಕ್ಕ ಪಕ್ಕದವರೂ " ನೀ ಬಂದು ಆಕಿನ ಹಾಳು ಮಾಡಿದಿ ನೋಡವ್ವ" ಎಂದಾಗ ಎಂದಿನ ತಿಳಿನಗೆ ಬೀರುತ್ತಿದ್ದಳು.

ಸದಾ ಚಿರಂಜೀವಿ, ಅವನ ಸಿನೆಮಾಗಳ ಬಗ್ಗೆಯೇ ಮಾತನಾಡುತ್ತಿದ್ದ ರಾಮಲಕ್ಷ್ಮಿ ಬೇರೆಯವರ ಬಗ್ಗೆ ದೂರು ಹೇಳುತ್ತಿದ್ದಿದ್ದು ಕಡಿಮೆ. ಯಾವಾಗಾದರೊಮ್ಮೆ,ತನ್ನ ಹೊಸ ಹೊಸ ವ್ಯಾಪಾರಕ್ಕೊಸ್ಕರ ಊರಿಡೀ ಸಾಲ ಮಾಡಿಕೊಂಡು, ಆಯುರ್ವೇದಿಕ್ ಕಾಲೇಜಿನಲ್ಲಿರೋ ಮಾಲಿ ಕೆಲಸ ನೆಟ್ಟಗೆ ಮಾಡೊದು ಬಿಟ್ಟು ಹುಡುಗೀರ ಹತ್ರ ಹರಟೊದನ್ನು ಹೇಳಿ ಅಳುತ್ತಿದ್ದಳು. ಅವಳ ತೆಲುಗುಗನ್ನಡವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಪೂರ್ಣಿಮಾ ಸಾಕಷ್ಟು ತೆಲುಗು ಕಲಿತಿದ್ದರೆ, ಅವಳ 'ಉಂಟು'ವನ್ನು ರಾಮಲಕ್ಷ್ಮಿ ತನ್ನ ಮಾತಿನಲ್ಲಿ ಧಾರಾಳವಾಗಿ ಬಳಸುತ್ತಿದ್ದಳು. ರಾಮಲಕ್ಷ್ಮಿಗೆ ಮಕ್ಕಳು ತಮ್ಮಂತಾಗದೆ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಹಿಡಿಯಬೇಕೆಂಬ ಆಸೆ, ಅದಕ್ಕಾಗಿ ಸಾಧ್ಯವಾದಷ್ಟು ದುಡಿದು ಹಣ ಕೂಡಿಸುತ್ತಿದ್ದಳು.

ಒಂದು ಶನಿವಾರ ತಡವಾಗಿ ಬಂದವಳ ಕಣ್ಣು ಕೆಂಪಾಗಿ ಬಾತುಕೊಂಡಿತ್ತು, ಅವಳು ಹೇಳಿದಿಷ್ಟು. ಅವಳಮ್ಮ, ಮದುವೆ ಸಮಯದಲ್ಲಿ ಒಂದಿಷ್ಟು ಚಿನ್ನ ಹಾಕಿದ್ದರಂತೆ, ಮತ್ತಿವಳು ಚಿನ್ನದ ಅಂಗಡಿಯಲ್ಲಿ ದುಡ್ಡು ಕಟ್ಟಿ ಒಂದಿಷ್ಟು ಮಾಡಿಟ್ಟುಕೊಂಡಿದ್ದಳಂತೆ. ಅವಳ ಗಂಡ ಊರಲ್ಲಿ ಜಮೀನು ತೆಗೆದುಕೊಳ್ಳಬೇಕು ಅಂದಾಗ ಅಡವಿಟ್ಟು ಹಣ ಕೊಟ್ಟಿದ್ದಾಳೆ. ಬಡ್ಡಿ, ಚಕ್ರ ಬಡ್ಡಿ ಎಲ್ಲಾ ಬೆಳೆದು ಈವಾಗ ೭೫,೦೦೦ವಾಗಿದೆ. ಇನ್ನೊಂದು ವಾರದಲ್ಲಿ ಪೂರ್ತಿ ಹಣ ಕೊಟ್ಟು ಬಿಡಿಸಿಕೊಳ್ಳದಿದ್ದರೆ ಅದೆಲ್ಲಾ ಗಿರವಿ ಅಂಗಡಿಯ ಪಾಲಾಗಲಿದೆ. ಹೋಗಲಿ ಜಮೀನಾದರೂ ಇದೆಯಾ, ಅದನ್ನೂ ಗಂಡ ಯಾವುದೋ ಸಾಲಕ್ಕೆ ಮಾರಿಯಾಗಿದೆ. ಗಂಡನ ಹತ್ತಿರ ಚಿನ್ನ ಬಿಡಿಸಿಕೊಡು ಅಂದರೆ, ಚೆನ್ನಾಗಿ ಹೊಡೆದು ಬಿಟ್ಟಿದ್ದಾನೆ ಎಂದು ಮನಸಾರೆ ಅತ್ತಳು. ಪೂರ್ಣಿಮಾಳಿಗೂ ಮರುಕವೆನ್ನಿಸಿತು, ಆದರೆ ೭೫,೦೦೦ ದೊಡ್ಡ ಮೊತ್ತ, ಏನು ಮಾಡಲೂ ತೋಚಲಿಲ್ಲ. ಅತ್ತುಕೊಂಡೆ ಕೆಲಸ ಮುಗಿಸಿ ರಾಮಲಕ್ಷ್ಮಿ ಹೋದರೂ, ಪೂರ್ಣಿಮಾ ಕಿವಿಯಲ್ಲಿ ಅಳು ಗುಂಯಿಗುಡುತಿತ್ತು.  ಸಂಜೆ ತಂದೆಗೆ ಫೋನ್ ಮಾಡಿ ಹೇಳಿ ಬೇಜಾರು ಮಾಡಿಕೊಂಡಳು. ಅವರೂ, "ಛೇ ಬ್ಯಾಂಕಿನಲ್ಲಿ ಇಟ್ಟಿದ್ದರೆ ಇಷ್ಟು ಬಡ್ಡಿ ಇರುತ್ತಿರಲಿಲ್ಲ, ಪಾಪ ಯಾರು ಹೇಳಿ ಕೊಡುತ್ತಾರೆ ಅವರಿಗೆ ಇದೆಲ್ಲಾ" ಎಂದರೂ, ಕೂಡಲೇ "ಸಾಲ ಮಾಡಿಯಾದರೂ ಆ ಹಣ ಕಟ್ಟಿ ಗಿರವಿ ಅಂಗಡಿಯಿಂದ ಬಿಡಿಸಿ ಅದೇ ಚಿನ್ನವನ್ನು ಬ್ಯಾಂಕಿನಲ್ಲಿಟ್ಟರೆ ಸಾಲ ಕೊಡುತ್ತಾರೆ. ಕೂಡಲೇ ಮೊದಲಿನ ಸಾಲ ತೀರಿಸಿ , ಬ್ಯಾಂಕಿಗೆ ತಿಂಗಳು ತಿಂಗಳು ಕಂತು ಕಟ್ಟಿ ಚಿನ್ನ ಉಳಿಸಿಕೊಳ್ಳಬಹುದು, ಹೇಗೋ ಚೆನ್ನಾಗಿ ದುಡಿಯುತ್ತಾರಲ್ಲ" ಎಂದರು. ಪೂರ್ಣಿಮಾಳಿಗೆ ಥಟ್ಟನೆ ಮಿಂಚೊಂದು ಹೊಳೆದಂತಾಯ್ತು.

ಎರಡು ದಿನವಾದ ಮೇಲೆ ರಾಮಲಕ್ಷ್ಮಿ ಒಳ ಬರುತ್ತಿದ್ದಂತೆಯೇ ಅಡುಗೆಮನೆಯಲ್ಲಿದ್ದ ಪೂರ್ಣಿಮಾ ಅಲ್ಲಿಂದಲೇ "ಹೊರ ಬಾಗಿಲು ಹಾಕ್ಬಾ" ಎಂದಳು. ಬಂದಾಗ ನೋಟುಗಳ ಕಟ್ಟುಗಳನ್ನು ನೀಡಿ ಅವಳ ಕೈದುಂಬಿದಳು. " ಇದರಲ್ಲಿ ೬೦,೦೦೦ಇದೆ, ಇಲ್ಲಿಗೆ ಬರುವಾಗ ನನ್ನ ತಂದೆ ಅಡಿಕೆ ಮಾರಿದ ದುಡ್ಡು ಜಾಸ್ತಿ ಬಂತು, ಒಡವೆ ಮಾಡಿಸಿಕೊ ಅಂತ ಕೊಟ್ಟಿದ್ದು, ಇವರಿಗೆ ಗೊತ್ತಿಲ್ಲ, ನೀವಿಬ್ರೂ ಹೇಗಾದರೂ ಮಾಡಿ ಇನ್ನುಳಿದ ಹಣ ಹಾಕಿ ಚಿನ್ನ ಬಿಡಿಸಿಕೊಳ್ಳಿ, ಬ್ಯಾಂಕಿನಲ್ಲಿ ಅಡವಿಟ್ಟು, ತಿಂಗಳುತಿಂಗಳು ಹಣ ಕಟ್ಟಿ, ಚಿನ್ನ ಎಲ್ಲೂ ಹೋಗಲ್ಲ, ನಾನೂ ಮ್ಯಾನೇಜರ್ ಹತ್ತಿರ ಮಾತನಾಡಿದ್ದೀನಿ" ಅಂದಳು. ಸ್ವಲ್ಪವೇ ಬೆಳಕಿದ್ದ ಅಡುಗೆ ಮನೆಯಲ್ಲಿ, ಒಲೆಯಲ್ಲಿ ಉರಿಯುತ್ತಿದ್ದ ಕೆಂಪು ಬೆಳಕಿನಲ್ಲಿ ರಾಮಲಕ್ಷ್ಮಿ ಭಾವನೆಗಳ ಹೊಡೆತಕ್ಕೆ ಸಿಕ್ಕಿ ಒಂದು ಕ್ಷಣ ನಡುಗಿದ್ದು ಅವಳಿಗರಿವಾಯಿತು. "ದೇವುಡಾ" ಎಂದ ರಾಮಲಕ್ಷ್ಮಿ ಕೂತುಬಿಟ್ಟಳು. ಪೂರ್ಣಿಮಾ ಪಕ್ಕದಲ್ಲೇ ಕೂತು ಅವಳ ತಲೆಸವರಿ "ಮಕ್ಕಳನ್ನು ಓದಿಸಬೇಕು ಅಂತಿದ್ದೆಯಲ್ಲ, ಆವಾಗ ಬೇಕಾಗುತ್ತೆ ಹಣ" ಅಂದಳು. ಕಣ್ಣೀರು ತುಂಬಿಕೊಂಡ ಅವಳು ಬರಿದೇ ತಲೆಯಾಡಿಸಿದಳು.
ಗಂಡ, ಹೆಂಡತಿ ಹೋಗಿ ಚಿನ್ನ ಬಿಡಿಸಿ ಅದನ್ನು ಬ್ಯಾಂಕಿನಲ್ಲಿಟ್ಟು ಇವಳ ಹಣವನ್ನು ವಾಪಸು ತಂದು ಕೊಟ್ಟಿದ್ದೂ, ಇವಳು ವಾಪಸು ಬ್ಯಾಂಕಿಗೆ ಹಾಕಿದ್ದೂ ಆಯಿತು. ವಾಪಸು ಕೊಡುವಾಗ ರಾಮಲಕ್ಷ್ಮಿ ಕೈಯನ್ನು ಕಣ್ಣಿಗೊತ್ತಿಕೊಂಡರೆ ಪೂರ್ಣಿಮಾ ಮೆತ್ತಗೆ ಕೈ ಬಿಡಿಸಿಕೊಂಡು ಎಂದಿನ ತಿಳಿನಗೆ ಬೀರಿದಳು.

ಅದಾಗಿ ಒಂದಾರು ತಿಂಗಳು ಕಳೆದಿರಬಹುದು. ಅದೊಂದು ದಿನ ಪೂರ್ಣಿಮಾಳಿಗೆ ವಿಪರೀತ ಜ್ವರ, ಕಾಡುವ ತಿಂಗಳ ಹೊಟ್ಟೆನೋವು ಬೇರೆ. ಬೆಳಗ್ಗೆ ಏಳಲೂ ಆಗದೆ ಪುಟ್ಟನನ್ನು ಶಾಲೆಗೂ ಕಳಿಸಲಾಗಲಿಲ್ಲ. ಗೊಣಗುತ್ತಲೇ ಇದ್ದ ಚಿದಾನಂದ ಕಷ್ಟಪಟ್ಟು ಹತ್ತಿರದ ಉಡುಪಿ ಹೋಟೆಲಿನಿಂದ ಇಡ್ಲಿ ತಂದು ಕುಕ್ಕಿದ, ಅವಳಿಗೆ ಜ್ವರ ಬಂದರೆ ಅವನಿಗೆ ಅಸಾಧ್ಯ ಸಿಟ್ಟು, ಸೆಡವು. ಅದನ್ನೆಲ್ಲ ಪಾಪದ ಪುಟ್ಟನ ಮೇಲೆ ಬೈದು, ಹೊಡೆದು ತೆಗೆಯುತ್ತಿದ್ದ. ಮಧ್ಯಾಹ್ನ ಹೊರಗಡೆ ಏನಾದರೂ ತಿಂತೀನಿ ಎಂದವನು ಹೊರಟೆ ಹೋದ. ಹಿಂದಿನ ದಿನ ರಾಮಲಕ್ಷ್ಮಿ ಬಂದಿರಲಿಲ್ಲ, ಅವತ್ತು ಸಂಜೆ ಸೈಕಲ್ ಬಿಡುತ್ತಿದ್ದ ಬಬಿತಾ "ನಮ್ಮನೆಗೂ ಬಂದಿಲ್ಲ ಆಂಟಿ, ಊರಿಗೆ ಹೋಗಿರಬೇಕು, ಮನೆಯಲ್ಲೂ ಯಾರಿಲ್ಲ" ಅಂದಿದ್ದಳು. 'ಇವತ್ತಾದರೂ ಬಂದರೆ ಸಾಕಪ್ಪ' ಎಂದು ಕಾಣದ ದೇವರಲ್ಲಿ ಮೊರೆಯಿಟ್ಟಳು. ಊಹೂಂ, ಆ ದಿನ ಮಾತ್ರವಲ್ಲ, ಆ ವಾರವಿಡೀ ಅವಳು ಬರಲೇ ಇಲ್ಲ.
ಜ್ವರದಿಂದ ಚೇತರಿಸಿಕೊಳ್ಳಲು ಪೂರ್ಣಿಮಾಗೆ ಸಾಕಷ್ಟು ಸಮಯವೇ ಹಿಡಿಯಿತು, ಶೀಲಾ, ನಿರ್ಮಲ ಆಂಟಿ ಇವಳೆಷ್ಟೇ ವಿರೋಧಿಸಿದರೂ ಕೇಳದೆ ಅವಾಗವಾಗ ಸಾರು, ಪಲ್ಯ  ಏನಾದರೊಂದು ಮಾಡಿ ತಂದು ಕೊಡುತ್ತಿದ್ದರು. ಪ್ರಮೀಳಾಂಟಿಯೂ ಬಂದು ಹೋಗುತ್ತಿದ್ದರು, ಎಲ್ಲರದೂ ಒಂದೇ ಆಕ್ಷೇಪ. ರಾಮಲಕ್ಷ್ಮಿ ಬಗ್ಗೆಯೇ. ಚಿದಾನಂದಂತೂ ಘಳಿಗೆ ಘಳಿಗೆಗೂ ಹಂಗಿಸಿ ಹಂಗಿಸಿ ಇಡುತ್ತಿದ್ದ, ಆರೋಗ್ಯ ವಿಚಾರಿಸಲೆಂದು ಅವಳ ತಂದೆ ಕರೆ ಮಾಡಿದರೆ ಅವರ ಬಳಿಯೂ ಚಾಡಿ ಚುಚ್ಚಿದ. ಪ್ರಮೀಳಾಂಟಿ ಕೆಲಸ ಬಗೆಹರಿಯದೆ ಯಾರನ್ನೋ ಕೆಲಸಕ್ಕಿಟ್ಟುಕೊಂಡರು, ಇವಳಿಗೂ ಹೇಳಬಂದಾಗ ಪೂರ್ಣಿಮಾ ನಯವಾಗಿ ನಿರಾಕರಿಸಿದಳು. ಕ್ರುದ್ಧರಾದ ಆಕೆ "ಇನ್ನೇನ್ ನೀ ಆಕಿ ಹಾದಿ ಕಾಯಕ್ ಹತ್ತಿಯೇನು? ಆಕಿ ಬಂದ್ರೂ ನಾ ಒಳಗ ಸೇರಿಸ್ಕೊಳ್ಳಾಕಿ ಅಲ್ಲ, ನೀ ಬೇಕಾದ್ದ್ ಮಾಡ್, ಇವುಗಳ ಬುದ್ಧಿ ಅಷ್ಟೇ, ಇವಕ್ಕೆಲ್ಲಾ ಎಲ್ಲಿಡಬೇಕೋ ಅಲ್ಲೇ ಇಡಬೇಕ್ ನೋಡ್ " ಎಂದು ಎಗರಾಡಿದರು. ಎಲ್ಲವನ್ನೂ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ಪೂರ್ಣಿಮಾ ತಾಳ್ಮೆಗೆಟ್ಟು "ಸುಮ್ಮನಿರಿ ಆಂಟಿ, ಅವರೂ ನಮ್ಮಂತೆ ಮನುಷ್ಯರು, ನಾಯಿ ಅಥವಾ ಚಪ್ಪಲಿಯಲ್ಲ" ಅಂದುಬಿಟ್ಟಳು. ಅವರು ದುರ್ದಾನ ತೆಗೆದುಕೊಂಡವರಂತೆ ಎದ್ದು ಹೋದರು. 

ಭಾನುವಾರ ಚಿದಾನಂದ ಹೊರಗೆ ಕೂತು ಪೇಪರ್ ಓದುತ್ತಿದ್ದ, ಒಳಗೆ ಚಾ ಮಾಡುತ್ತಿದ್ದ ಪೂರ್ಣಿಮಾ ಯಾರೋ ಕರೆದಂತಾಗಿ ಹೊರಬಂದರೆ, ತಲೆ ತುಂಬಾ ಹೂ ಮುಡಿದು, ಕಣ್ಣಿಗೆ ಹೊಡೆಯುವ ಬಣ್ಣದ ಸೀರೆಯುಟ್ಟು ರಾಮಲಕ್ಷ್ಮಿ ನಗುತ್ತಾ ಗೇಟು ತೆಗೆದು ಒಳಬರುತ್ತಿದ್ದಳು. ಸಂಭ್ರಮ, ಸಡಗರದಿಂದ ಊರಲ್ಲಿ ಜಾತ್ರೆಯಿತ್ತೆಂದೂ, ರಥ ಎಳೆದು ಹರಕೆ ತೀರಿಸಿದ್ದೂ ಹೇಳಿ ಜಾತ್ರೆಯಿಂದ ಪುಟ್ಟನಿಗಾಗಿ ತಂದ, ಮುಟ್ಟಿದರೆ ಕುತ್ತಿಗೆ ಕೊಂಕಿಸುವ ಹುಡುಗಿಯ ಬೊಂಬೆಯನ್ನು ಇವಳ ಕೈಗೆ ನೀಡಿದಳು. ನಿರ್ವಿಕಾರ ಭಾವದಿಂದ ಪೂರ್ಣಿಮಾ ತೆಗೆದುಕೊಂಡರೆ, ಸಶಬ್ದವಾಗಿ ಚೇರನ್ನು ದೂಡಿ, ಕಾಲನ್ನಪ್ಪಳಿಸುತ್ತ ಚಿದಾನಂದ ಒಳಗೆ ಹೋದ. ಕೈಯಲ್ಲಿದ್ದ ಬೊಂಬೆಯನ್ನೇ ದಿಟ್ಟಿಸಿ ನೋಡಿದ ಪೂರ್ಣಿಮಾ, ಎಲ್ಲರಿಗೂ ಪ್ರಸಾದ ಹಂಚಿ ಆಮೇಲೆ ಬರ್ತೀನಿ ಅಂದು ಹೊರಟ ರಾಮಲಕ್ಷ್ಮಿಯನ್ನು ಕರೆದು ನಿಲ್ಲಿಸಿದಳು. " ಇಷ್ಟು ಹತ್ತಿರ ಮನೆಯಿದ್ದು ಒಂದು ಮಾತು ಹೇಳಿ ಹೋಗಬೇಕು ಅನಿಸಲಿಲ್ವ ನಿಂಗೆ?, ಒಂದಲ್ಲ,ಎರಡಲ್ಲ, ಎಂಟು ದಿನ ರಜೆ ಹಾಕಿದ್ದೀಯಲ್ಲಾ, ನಿನ್ನ ಗಂಡನಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಅಂತ ಬರುತ್ತೆ, ಇಲ್ಲಿ ಎಲ್ಲರ ಹತ್ರನೂ ಎಷ್ಟು ಮಾತು ಕೇಳಬೇಕಾಯ್ತು ನಿನ್ನಿಂದ, ಇಷ್ಟು ಪ್ರೀತಿ ಮಾಡಿದ್ದಕ್ಕೆ ಸರಿಯಾಗೇ ಮಾಡಿದೆ ಬಿಡು" ಅಂದಳು. ತೆರೆದ ಗೇಟನ್ನು ಧಬಾರನೆ ಬಡಿದ ರಾಮಲಕ್ಷ್ಮಿ ಅಲ್ಲಿಂದ ಹೋಗಿಯೇಬಿಟ್ಟಳು. ಗೊಂಬೆಯೊಂದಿಗೆ ಎಷ್ಟೋ ಹೊತ್ತು ನಿಂತಿದ್ದ ಪೂರ್ಣಿಮಾ ಕಾಲೆಳೆದುಕೊಂಡು ಒಳನಡೆದಳು. ಅದಾದ ಮೇಲೆ ಅವಳೆಂದೂ ಮನೆ ಕಡೆ ತಲೆ ಹಾಕಲೇ ಇಲ್ಲ. 

ಎಲ್ಲವನ್ನೂ ಯೋಚಿಸುತ್ತ ಕೂತವಳಿಗೆ ಅರಿವು ತಿಳಿದಾಗ ಘಂಟೆ ಆರಾಗಿತ್ತು,ಒಳಬಂದರೆ ಊಟ ಮುಗಿಸಿದ ಪುಟ್ಟ ಅಲ್ಲೇ ನಿದ್ದೆ ಹೋಗಿದ್ದ, ಟಿವಿಯಲ್ಲಿ ಡೋರೆಮಾನ್ ಮಾತನಾಡುತ್ತಲೇ ಇದ್ದ.  ಅವನನ್ನೆಬ್ಬಿಸಿ ಹಾಲು ಕುಡಿಸುವ ಹೊತ್ತಿಗೆ ಬಂದ ಚಿದಾನಂದ, "ಪೂರ್ಣಿಮಾ, ಗದಗಕ್ಕೆ ವರ್ಗವಾಗಿದೆ" ಅಂದ.

 ಮುಂದಿನ ಒಂದು ತಿಂಗಳಲ್ಲಿ ಎಲ್ಲವೂ ಪ್ಯಾಕಾಗಿತ್ತು. ಆಚೀಚೆ ಮನೆಯವರು, ಚಿದಾನಂದನ ಆಫೀಸಿನವರು ಎಲ್ಲರೂ ಊಟಕ್ಕೆ ಕರೆದಿದ್ದರು.ಪ್ರಮೀಳಾಂಟಿಯೂ ಚೂಡಾ,ಚಾ ಸತ್ಕಾರ ಮಾಡಿದ್ದರು.  ಗೌರಿಗೂ ಪೂರ್ಣಿಮಾ ಹೋಗ್ತೀನಿ ಎಂದಾಗಿತ್ತು. ಕೊನೆಗೆ ಹೊರಡೊ ದಿನ ಬಂದಾಗ  ವ್ಯಾನಿಗೆ ಸಾಮಾನು ಹಾಕಲು ತಾನಾಗೆ ಬಂದ ರಾಮಲಕ್ಷಿ ಗಂಡ ನಾಗರಾಜ, ಎಲ್ಲಾ ಮುಗಿದ ಮೇಲೆ ಚಿದಾನಂದನಿಲ್ಲದ ಸಮಯ ನೋಡಿ "ನಿಮ್ಮಿಂದ ಭಾಳ ಉಪಕಾರ ಆತ್ರೀ ಅಕ್ಕೊರೆ" ಎಂದ. "ನನ್ನ ನೋಡೋಕೆ, ಮಾತನಾಡೋಕೆ ರಾಮಲಕ್ಷ್ಮಿ ಯಾಕೆ ಬರಲಿಲ್ಲ? "ಎಂದು ಕೇಳಿದಳು. ಸ್ವಲ್ಪ ಹೊತ್ತು ಸುಮ್ಮನಿದ್ದ ಅವನು, "ಆಕಿಗೆ ಅಗದೀ ಸಿಟ್ಟು, ನೀವ್ ಬೈದ್ರಂತಲ್ಲ" ಅಂದ. ಭಾವನೆಗಳು ಕಾಣದಂತೆ ಮುಖ ತಿರುಗಿಸಿದ ಪೂರ್ಣಿಮಾ ವ್ಯಾನಿನ ಡ್ರೈವರ್ ಹತ್ತಿರ ಕೂತ ಪುಟ್ಟನನ್ನು ಕೆಳಗಿಳಿಸಿಕೊಂಡಳು. ಕಾಲನಿಯ ಎಲ್ಲರೂ ಬೀಳ್ಕೊಡಲು ಬಂದಿದ್ದರು, ಬೀದಿಯ ಮರದ ಕೆಳಗೆ ಮರದ ಪೆಟ್ಟಿಗೆಯಿಟ್ಟು ಇಸ್ತ್ರಿ ಮಾಡುವ ಕಲ್ಲಪ್ಪನೂ ಬಂದು"ಹೋಗ್ ಬರ್ರೀ ಅಕ್ಕಾರ" ಅಂದ. ಸಾಮಾನೆಲ್ಲ ಹೊತ್ತ ವ್ಯಾನು ಮುಂದೆ ನಿಂತಿದ್ದರೆ, ಹಿಂದೆಯೇ ನಿಂತಿದ್ದ ಕಾರಿನಲ್ಲಿ ಪುಟ್ಟ, ಅವನಪ್ಪ ಕೂತಾಗಿತ್ತು. ಪೂರ್ಣಿಮಾ ಕಣ್ಣು ಮತ್ತೆ ಮತ್ತೆ ರಾಮಲಕ್ಷ್ಮಿಯ ಮನೆಯ ಕಡೆಯೇ ಹರಿಯುತ್ತಿತ್ತು. ಗೇಟಿನ ಬಳಿ ನಿಂತವಳು ನಾಗರಾಜನ ಬಳಿ ಹೋಗಿ, ವ್ಯಾನಿಟಿ ಬ್ಯಾಗಿನಲ್ಲಿದ್ದ ಪ್ಲಾಸ್ಟಿಕ್ ಕವರನ್ನು ಕೊಟ್ಟು, "ರಾಮಲಕ್ಷ್ಮಿಗೆ ಉದ್ದಲಂಗ,ಜಾಕೀಟು ಹಾಕಬೇಕು ಅಂತ ತುಂಬಾ ಆಸೆ, ಇದನ್ನು ಅವಳಿಗೆ ಕೊಡಿ ನಾಗರಾಜ್ ಅವ್ರೆ" ಎಂದು ನಡೆದುಬಂದು ಇವಳೆಡೆಯೆ ದುರುಗುಟ್ಟಿ ನೋಡುತ್ತಿದ್ದ ಚಿದಾನಂದನೆಡೆಗೆ ತಿಳಿನಗೆ ಬೀರಿ ಕಾರು ಹತ್ತಿದಳು. ಆ ಕಡೆ ಬೀದಿಯಲ್ಲಿ ರಾಯರ ಮಠದ ಎದುರು ಕೂತ ರಾಮಲಕ್ಷ್ಮಿ ಕಣ್ಣಲ್ಲಿ ನೀರು ಹರಿಯುತ್ತಿತ್ತು.


ಬ್ಯಾಗಿನಲ್ಲಿ ರಾಶಿ ಪೇಪರುಗಳ ಮಧ್ಯೆ ಭದ್ರವಾಗಿ ಕುಳಿತಿದ್ದ ಹುಡುಗಿ ಬೊಂಬೆ ಮಾತ್ರ ತಲೆಯಲ್ಲಾಡಿಸಿ ಮೆಲ್ಲಗೆ ನಕ್ಕಿತು.

Wednesday, May 11, 2016

May 8th Viraama


ಚಿತ್ತಾರಗಳು

ನರಸಿಂಹ ಭಿಡೆ ಪಕ್ಕದಲ್ಲೇ ಕೂತು ಶೀತಲ ಏರಿಳಿತವಿಲ್ಲದ ದನಿಯಲ್ಲಿ, ಹೇಳುತ್ತಲೇ ಹೋದ. ಕೇಳುತ್ತ ಕೇಳುತ್ತ ರೀಲುಗಳು ನನ್ನ ಕಣ್ಣ ಮುಂದೆ ಸುತ್ತುತ್ತಲೇ ಹೋದವು. ಅಪ್ಪನ ಕಾಲಿನ ನರಗಳು, ಬಾವಿ ನೀರ ಸೇದಿ ಸೇದಿ ಕೈ ಚರ್ಮ ಸುಲಿದ ಅಮ್ಮ, ಒಳಗಿನ ಸನ್ಯಾಸಿನಿಯನ್ನು ಬಡಿಯಲೆತ್ನಿಸುವ ಅಕ್ಕ, ರಾತ್ರಿ ಕೂತು ಕೇಳುತ್ತಿದ್ದ ಸತ್ಯನಾರಾಯಣ ಮೇಷ್ಟ್ರು, ನಿರ್ಭಾವುಕ (?) ಮಂಗಳಾ, ಸಿಡಿಲು ತಡೆದ ಸರೋಜಿನಿ....ಎಲ್ಲಕ್ಕಿಂತ ತೀವ್ರವಾಗಿ ಕಾಡುತ್ತಿರುವುದು ದಿಟ್ಟಿಸಿ ನೋಡುತ್ತಿರುವ ಅಳಿಲು.....

ಹಾನಗರದ ಮಗ್ಗಲುಗಳು ಇಷ್ಟು ವೈವಿಧ್ಯಮಯವಾಗಿರಬಲ್ಲದೆ? ಕಣ್ಣಿಗೆ ಕಾಣುವ ಜಯ-ವಿಜಯ ನಗರಗಳು, ಕೋರಮಂಗಲ - ಎಂ ಜಿ ರೋಡುಗಳೂ, ಸುಖ ಸವಲತ್ತಿನ ಅಪಾರ್ಟುಮೆಂಟುಗಳು, ದೌಲತ್ತಿನ ಮಾಲುಗಳು, ಒಣ ಆಡಂಬರದ ಶ್ರೀಮಂತ ದೇವರುಗಳು ಇವೆಲ್ಲದಕ್ಕೂ ತನ್ನ ಮಗಳನ್ನು ಹುಡುಕುತ್ತಿರುವ ಅಂಜನಪ್ಪ ಗುರುತಿದ್ದಾನೆಯೇ, ನರಸಿಂಹ ಭಿಡೆಯ ಆತ್ಮ ಬಗೆದು ನೋಡಲು ಸಾಕ್ಷಾತ್ ಉಗ್ರ ನರಸಿಂಹನಿಗೂ ಆಗುತ್ತದೆಯೇ? ಏರಿಯಕ್ಕೊಂದು ತಲೆ ಎತ್ತಿ ನಿಂತಿರುವ ಬಿಡಿಎ ಕಾಂಪ್ಲೆಕ್ಸಿನ ಅಂಗಡಿಗಳಲ್ಲಿ ನೇತು ಹಾಕಿರುವ ಬಗೆ ಬಗೆ ವಿನ್ಯಾಸದ, ರಂಗ್ ಭಿ ರಂಗೀ ಬಟ್ಟೆಗಳಲ್ಲಿ ಜ್ಯೂಲಿಯ, ಸಹನಾಳ ಬಣ್ಣದ ಕನಸಿರಬಹುದೇ? ನಮ್ಮ ಊರಲ್ಲಿ ಬಿಟ್ಟು ಬಂದ ಹಾದಿ ಬೀದಿಗಳು, ಅಂಗಡಿಗಳು, ಮನುಷ್ಯರು ಇಲ್ಲೂ ಸಿಗಬಹುದೇ ? ಅಪ್ಪ ಅಮ್ಮಂದಿರು ಹತ್ತಿರ ಇರುವಾಗಕ್ಕಿಂತ ದೂರವಾದಾಗ ಏಕೆ ಹತ್ತಿರವಾಗುತ್ತಾರೆ, ಕಾಡುತ್ತಾರೆ, ಕಾಣುವ ಮುಖಗಳಲೆಲ್ಲಾ ಏಕೆ ಮಿಂಚಿ ಮರೆಯಾಗುತ್ತಾರೆ?

ಇದಾವ ಪರಿಯ ನಗರ?

ಕೈ ಹಿಡಿದು ಎಳೆಯಲೆತ್ನಿಸಿದ ಹುಚ್ಚ ಅಪ್ಪ, ತಣ್ಣೀರಲ್ಲಿ ತೊಯ್ದ ಕಾಗದದ ಚೂರುಗಳು, ಆಸ್ತಿ ಪಂಜರವಾದ, ಬೂದಿಯಾದ ಅವರ ಶರೀರಗಳು ಅಷ್ಟೇ ಸುಲಭಕ್ಕೆ ಬೂದಿಯಾಗದ ನೆನಪಿನ ಮಾಲೆಗಳು, ಜೀವನದ ಕಾಲು ಭಾಗ ಅವರೊಂದಿಗೆ, ಇನ್ನು ಉಳಿದ ಮುಕ್ಕಾಲು ಭಾಗ ಅವರ ನೆನಪಿನೊಂದಿಗೆ ಕಳೆಯುವ ನಾವುಗಳು ಇಷ್ಟೇ ತೀವ್ರವಾಗಿ ನಮ್ಮ ಮಕ್ಕಳ ಬದುಕಲ್ಲೂ ಇರುತ್ತೆವೆಯೇ? ಅಂತಹ ಸಾಧ್ಯತೆಗಳ ಬಗ್ಗೆ ಯೋಚಿಸಿದಾಗ ಮೈ ನಡುಗುತ್ತದೆ, ಮತ್ತೊಂದು ಜೀವ ಭೂಮಿಗೆ ತಂದು ಅದರ ಕಣ್ಣಲ್ಲಿ ನಮ್ಮ ಬದುಕು ಹೇಗಿರಬಹುದು ಎಂಬ ಯೋಚನೆಯೇ ವಿಚಿತ್ರವೆನಿಸುತ್ತದೆ. ಯಾವುದನ್ನೋ ಮರೆಯುವುದಕ್ಕೆ, ಅಳಿಸುವುದಕ್ಕೆ ಇನ್ನ್ಯಾರನ್ನೋ ನೋಯಿಸುತ್ತವೆ, ಅಳಿಸುತ್ತೇವೆ. ಕೊನೆಗೊಮ್ಮೆ ಛಿದ್ರ ಛಿದ್ರವಾದ, ಜೀರ್ಣಾವಸ್ಥೆಯಲ್ಲಿರುವ ಬದುಕಿನ ಅಂಗಿ ಹಿಡಿದು ನಾವೂ ಕೂತು ಅಳುತ್ತೇವೆ. ಕಳೆದ ಘಳಿಗೆ ನೆನೆಯುತ್ತಾ ಈ ಕ್ಷಣದಲ್ಲಿ ಬದುಕದೆ ಸವೆಯುವ ನಾವುಗಳು ಜಗತ್ತಿನ ಯಾವುದೇ ನಗರಕ್ಕೂ ಸಲ್ಲದವರು. 

ಇವಿಷ್ಟೂ ಜೋಗಿಯವರ ಹೊಸ ಕಾದಂಬರಿ ‘ಬೆಂಗಳೂರು’ ಹೊಳೆಯಿಸಿದ್ದು.


smile emoticon

Thursday, May 5, 2016

Importance

ಧ್ರುವನ ಕಥೆಯ ಅನಿಮೇಶನ್ ವಿಡಿಯೋ ನೋಡಿ, ಅಮರ ಚಿತ್ರ ಕಥೆಯಲ್ಲೂ ಅದೇ ಕಥೆ ಓದಿದ ಪುಟ್ಟ ಕೇಳಿದ್ದು, " ಅಮ್ಮ... ಧ್ರುವ, ವಿಷ್ಣು ಬಂದಾಗ ಅವನ ಪಪ್ಪನ ತೊಡೆಯಲ್ಲಿ ಕೂತ್ಕೊಬೇಕು ಅಂತ ಕೇಳೇ ಇಲ್ಲ, ಬರೀ ರಾಜ ಆಗಬೇಕು ಅಂತ ಕೇಳಿದ. ಅವನು ತಪಸ್ಸು ಮಾಡಿದ್ದು ಅದಕ್ಕಲ್ಲ ಅಲ್ವಾ ಅಮ್ಮ?" 

ಅಮೃತದ ಕಥೆ

ಕಾಲು ಕೇಜಿ ಶೇಂಗಾ ಚಟ್ನಿಯನ್ನು ಒಂದೇ ವಾರದಲ್ಲಿ ಖಾಲಿ ಮಾಡುವ ಪುಟ್ಟನಿಗೆ ಯಾವುದನ್ನೂ ಅಷ್ಟೆಲ್ಲಾ ಜಾಸ್ತಿ ತಿನ್ನಬಾರದು, ಅತಿಯಾದರೆ ಅಮೃತವೂ ವಿಷವಾಗುತ್ತದೆ ಅಂದೆ. ಆಯ್ತಾ, ಶುರುವಾಯಿತು ಅಮೃತ ಅಂದ್ರೆ ಏನು, ಅತಿ ಅಂದ್ರೆ ಏನು, ವಿಷ ಅಂದ್ರೆ ಏನು ಅಮ್ಮ ಅಂತ ಪ್ರಶ್ನೆಗಳ ಹಾವಳಿ. ಸರಿ, ಅಮೃತ,ವಿಷ ಮತ್ತು ಅತಿ ಅಂದರೆ ಏನು ಅಂತ ಹೇಳಿಯಾದ ಮೇಲೆ ಅಮೃತ ಎಲ್ಲಿ ಸಿಗುತ್ತೆ ಅನ್ನೋ ಪ್ರಶ್ನೆಗೆ ಸಮುದ್ರ ಮಂಥನದಿಂದ ಶುರುವಾದ ಕಥೆ, ಮೋಹಿನಿ ಮೋಸ ಮಾಡುವವರೆಗೆ ಬಂದು ನಿಂತಿತು. ಕಥೆ ಹೀಗಿದೆ, ಅಮೃತ ಅನ್ನುವ ಅತೀ ಒಳ್ಳೆಯ ವಸ್ತುವನ್ನು ಜಾಸ್ತಿ ಕುಡಿದರೆ ಅದೂ ವಿಷ ಆಗುತ್ತೆ ಪುಟ್ಟ ಎಂದೆ. ಎಲ್ಲಾ ಕೇಳಿದ ಪುಟ್ಟ ಹೇಳಿದ, " ಹಾಂ, ಅಮ್ಮ ಈಗ ಅರ್ಥ ಆಯಿತು, ದೇವತೆಗಳು ಸ್ವಲ್ಪ ಅಮೃತ ಕುಡಿದರು, ಅದಕ್ಕೆ ಅವರು ಬದುಕಿದರು. ರಾಕ್ಷಸರು ಅಮೃತ ಕುಡಿದೂ, ಕುಡಿದೂ ಸತ್ತು ಹೋದ್ರು" ಅಂತ. ನಾನು ತಲೆ ಮೇಲೆ ಕೈ ಇಟ್ಟು ಕುಳಿತೆ.

ಘಮಲು

ಪಕ್ಕದ ಮನೆಯ ಗಾಯತ್ರಿ ಅಮ್ಮ ಕೊಡೋ ಅನ್ನ, ದಾಳಿ ತೊವೆ, ಪತ್ರೊಡೆ 
ಮೂರನೇ ಮನೆಯ ಪಳನಿ ಅಂಕಲ್ ತರೋ ಗಜಗಾತ್ರದ ಸೀಬೆ ಹಣ್ಣು
ಅದರ ಪಕ್ಕದ ಮನೆಯ ನೇತ್ರಾ ಆಂಟಿ ಮಾಡುವ ಅಕ್ಕಿ ರೊಟ್ಟಿ, ಕಾಯಿ ಚಟ್ನಿ 
ಚಾಳಿನ ಕೊನೆಯ ಮನೆಯ ಫರೀದಕ್ಕ, ಅವರ ಮನೆಯಲ್ಲಿ ಸಿಗುವ ಬದಾಮು, ಖೀರು
ಬೀದಿ ದಾಟಿದರೆ ಆಲಮೇಲು ಆಂಟಿಯ ಗಮ ಗಮ ಪುಳಿಯೋಗರೆ
ಆ ಬೀದಿಯ ಕೊನೆಗೆ ಇಸ್ತ್ರಿ ಮಾಡುವ ಕುಮಾರ್ ಅಂಕಲ್ ಕೊಡೋ ನಿಂಬೆ ಹುಳಿ ಪೆಪ್ಪರಮಿಂಟು
ಅದರಾಚೆ ಬೀದಿಯ ಜಾನಪ್ಪ ಗೌಡರ ಮನೆಯ ಮುದ್ದೆ, ಅವರೇ ಹುಳಿ
ಅಲ್ಲೇ ಪಕ್ಕದಲ್ಲಿದ್ದ ದೊಡ್ಡ ಮನೆಯ ಲೂಸಿ ಆಂಟಿ ಮನೆಯ ಕ್ರಿಸ್ಮಸ್ ಕೇಕು
ಎರಡೇ ಬೀದಿ ದಾಟಿದರೆ ಪಲ್ಲೇದ್ ಆಂಟಿ ಮಾಡಿ ಕೊಡೋ ಬಿಸಿ ಜೋಳದ ರೊಟ್ಟಿ, ಬೆಣ್ಣೆ, ಪಲ್ಲೆ
ಬಜಾರಿನಲ್ಲಿ ಬಟ್ಟೆ ಅಂಗಡಿಯ ಹಿಂದೆಯೇ ಅಂಗಡಿಯವರ ಮನೆ, ಅಲ್ಲಿ ಮೆದ್ದು ಬಂದ ಪದರದ ಚಪಾತಿ, ತುಪ್ಪ, ಸಕ್ಕರೆ
ಬಾಲ್ಯ ಅಂದ್ರೆ ಇಷ್ಟೂ ಇಲ್ಲದಿದ್ರೆ ಹೇಗೆ ಹೇಳ್ರಿ, ಒಟ್ಟಿನಲ್ಲಿ ಇಡೀ ಮೂಡಿಗೆರೆ ನಮ್ದೆ ಕಣ್ರೀ!
ಇವನ್ನೆಲ್ಲ ನೆನೆದು ನನ್ನ ಪುಟಾಣಿ ಪುಟ್ಟಣ್ಣನಿಗೆ ಹೇಳಿದ್ರೆ
ಪಾಪ ಅವನಿಗೆ ಸಿಕ್ಕಿದ್ದು ಪಕ್ಕದ ಫ್ಲಾಟಿನ ಪೂಜೆಯ ಸಪಾತ ಭಕ್ಷ್ಯದ ಘಮಲು ಮಾತ್ರ

ಪುಟ್ಟಣ್ಣನ ನಿದ್ದೆ

ಡೊರೆಮೊನ್ ಸುಸ್ತಾಗಿ ಬೆಡ್ ಶೀಟಲ್ಲಿ ಹುದುಗಿ ಬಿಟ್ಟ
ಡಾಗೀಶ ಕೈ ಕಾಲು ಬಿಸಾಡಿ ಮಲಗಿದ 
ಆನೆರಾಯನ ಮುಖವೂ ಸಣ್ಣಗಾಯ್ತು
ವಿನ್ನಿಯಂತೂ ಬಿಟ್ಟ ಕಣ್ಣ ಮುಚ್ಚಲೇ ಇಲ್ಲ
ಈ ಪುಟ್ಟಣ್ಣನ ನಿದ್ದೆ ಮುಗಿತಾನೆ ಇಲ್ಲ...
ಪುಟ್ಟಣ್ಣ ಎದ್ದರೆ ಹಾಲಿಗೆ ಕರಕೊಂಡು ಹೋಗ್ತಾನೆ
ಮನಸ್ಸಾದರೆ ಬಾಲ್ಕನಿಗೂ
ಅಮ್ಮ ನೋಡದೆ ಇದ್ದರೆ ನಲ್ಲಿ ಕೆಳಗೂ ನಿಂತುಕೊಳ್ಳಬಹುದು
ಪುಟ್ಟಣ್ಣ, ಏಳೋ ಮಾರಾಯ ಬೇಗ!
ನೀನಂತೂ ಇಡೀ ದಿನ ಕ್ರಿಕೆಟ್ ಆಡ್ತೀ, ಹೊರಗಡೆ ಇರ್ತೀ
ನಮಗೆ ಮಾತ್ರ ಎಲ್ಲೂ ಹೋಗೋಕಿಲ್ಲ
ನೀನು ಸ್ವಿಮ್ಮಿಂಗೂ ಮಾಡ್ತಿ, ಐಸ್ಕ್ರೀಮೂ ತಿಂತಿ
ಎರಡು ಮೂರು ಸಲ ಸ್ನಾನ ಬೇರೆ
ನಮಗೆ ಶೆಕೆಯೋ ಶೆಕೆ ಮಾರಾಯ
ಏಳೋ ಪುಣ್ಯಾತ್ಮ ಒಂದ್ಸಲ!



Monday, April 18, 2016

Sunday, February 28, 2016

ವಿಷ್ಣು

ವಿಷ್ಣು

ಕೆಲವೊಮ್ಮೆ ಹೀಗಾಗುತ್ತೆ, ನಾವು ಅತಿಯಾಗಿ ಪ್ರೀತಿಸುವವರ ಹೊಲಿಕೆಯೋ, ಅವರ ಛಾಯೆಯೋ ಯಾವುದೋ ಒಂದು ಇನ್ನೊಬ್ಬರಲ್ಲಿ ಕಂಡು ಬಂದು ಅವರನ್ನೂ ಪ್ರೀತಿಸತೊಡಗುತ್ತೇವೆ. ನನ್ನ ವಿಷ್ಣುವರ್ಧನ್ ನನ್ನ ಮನಸ್ಸಲ್ಲಿ ಕೂತ ಬಗೆಯಿದು. ಪ್ರಪಂಚದ ಬಗ್ಗೆ ಕಡಿಮೆ exposure ಇದ್ದ  ವರ್ಷಗಳೋ, ಅಥವಾ ಚೆಂದ ಅನಿಸಿದ್ದೆಲ್ಲ ಒಳ್ಳೆಯದು ಎನ್ನುವ ಆ ಮುಗ್ಧ ಬಾಲ್ಯವೋ ಅಂತೂ ಅತೀ ಚಿಕ್ಕ ವಯಸ್ಸಿಗೆ ವಿಷ್ಣುವರ್ಧನ್ ನನ್ನ ಮನಸ್ಸಿನಲ್ಲಿ ಮನೆ ಮಾಡಿದ್ದ. ನನ್ನ ಪರೀಕ್ಷೆಯ ರಟ್ಟಿಗೆ ಅಂಟಿಸಿದ್ದ ಕೈಲಿ ಗುಲಾಬಿ ಹಿಡಿದ ಬಂಧನ ಚಿತ್ರದ ಒಂದು ಚಿತ್ರ ಮತ್ತು ಮಲಯ ಮಾರುತದ ಕ್ಯಾಸೆಟ್ಟಿನಲ್ಲಿ ನೀಲಿ ಬಣ್ಣದ ಹಿನ್ನಲೆಯಲ್ಲಿ ಬಿಳಿ ಜುಬ್ಬಾ, ಪೈಜಾಮ ತೊಟ್ಟು ಹಾಡುತ್ತಿರುವ ಚಿತ್ರ ಬಹುಶ ಎಂದೂ ಮಾಸಲಾರದು. ಹೊಯ್ಸಳ ವಂಶದ ವಿಷ್ಣುವರ್ಧನನ ಬಗ್ಗೆ ಶಾಲೆಯಲ್ಲಿ ಪಾಠ ಬಂದಾಗ ನನ್ನ ಕಲ್ಪನೆಗೆ ಬಂದಿದ್ದು ರಾಜನ ದಿರಿಸು ತೊಟ್ಟ ವಿಷ್ಣುವೇ!

ನಾನು ಪರೀಕ್ಷೆ ರಟ್ಟಿನ ಚಿತ್ರ ಬಿಟ್ಟರೆ ಮತ್ತೆಂದೂ ಪೇಪರ್ನಲ್ಲಿ ಬಂದ ವಿಷ್ಣು ಚಿತ್ರಗಳನ್ನು ಕತ್ತರಿಸಲಿಲ್ಲ, ಅವನ ಬಗ್ಗೆ ಎಂದೂ ಏನೂ ತಿಳಿದುಕೊಳ್ಳಲು ಬಯಸಲಿಲ್ಲ. ಇಂದಿಗೂ ವಿಷ್ಣು ಚಿತ್ರಗಳ ಸಂಖ್ಯೆ, ಹೆಸರುಗಳು ಅದಾವುದೂ ನನಗೆ ಗೊತ್ತಿಲ್ಲ. ಆದರೆ ಬಾಲ್ಯದಲ್ಲಿ ನಾ ನೋಡಿದ್ದು ವಿಷ್ಣು ಚಿತ್ರಗಳೇ ಜಾಸ್ತಿ. ನನ್ನ ಹಾಡು ನನ್ನದು ಕೇಳುವಾಗೆಲ್ಲ ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ ಕೂತ ವಿಷ್ಣು ಕಣ್ಣೆದಿರು ಬಂದು ನಗುತ್ತಾರೆ, ಯೂ ಟ್ಯೂಬಿನಲ್ಲಿ ಹಾಡು ನೋಡುವಾಗ ಮೇಲಿನ ಶೃದ್ಧಾಂಜಲಿ ನನಗೆಂದೂ ಭಾದಿಸುವುದಿಲ್ಲ. ಸತ್ತಾಗ ತುಂಬಾ ಅತ್ತಿದ್ದು ಬಿಟ್ಟರೆ ನಾನೆಂದೂ ವಿಷ್ಣುವನ್ನು ಮಿಸ್ ಮಾಡಿದ್ದೆ ಇಲ್ಲ. ಬೇಕೆಂದಾಗೆಲ್ಲ ಹಾಡು-ಚಲನಚಿತ್ರಗಳಲ್ಲಿ ಬರುವ ವಿಷ್ಣು, ನೂರು ಜನರು ಬಂದರೂ ನೂರು ಜನರು ಹೋದರೂ ನನ್ನ ಜೀವನದ ಒಂದು ಭಾಗ. ಹಾದಿ, ಬೀದಿಗಳಲ್ಲಿ ಅಭಿಮಾನಿ ಸಂಘದವರು ಹಾಕಿರುವ ಚಿತ್ರಗಳಲ್ಲಿ ಕೂತ ವಿಷ್ಣು ನನ್ನ ನೋಡಿ ನಗುತ್ತಾನೆ.

ನಾನು ವಿಷ್ಣು ಅಭಿಮಾನಿಯಲ್ಲ, ಅವನ ಖಾಸಗಿ ವಿಷಯಗಳು, ಅವನ ವರ್ತನೆಗಳು, ಕೊನೆ ಕೊನೆಗೆ ಬಂದ ಚಿತ್ರಗಳು ಯಾವುದೂ ನನಗೆ ಸಂಭಂದಿಸಿದ್ದಲ್ಲ!

ಇವಿಷ್ಟೂ ಶಾರೂಕಿನ ಹೊಸ ಚಿತ್ರ 'ಫ್ಯಾನ್'ನ ಪ್ರೊಮೊಗಾಗಿ ಯಶ್ ರಾಜ್ ಫಿಲಂಸ್ ಅವರು ತೆಗೆದ ವಿಡಿಯೋ 'ತುಮ್ ನಹಿ ಸಂಜೋಗೆ'ಯ ಕಂತುಗಳನ್ನು ನೋಡಿದಾಗ ಅನಿಸಿದ್ದು. ಸಚಿನ್, ಚಾರ್ಲಿ ಚಾಪ್ಲಿನ್, ಮೈಕಲ್ ಜಾಕ್ಸನ್, ಶಾರೂಕ್ ಹಾಗೂ ಅಮಿತಾಬ್ ಅಭಿಮಾನಿಗಳನ್ನು ಮಾತನಾಡಿಸಿ ತೆಗೆದ ವಿಡಿಯೋಗಳು ಇವು. ಯಾರನ್ನೋ ಬದುಕಿನ  ಭಾಗವಾಗಿ ಸ್ವೀಕರಿಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ವಿನಾಕಾರಣ ಪ್ರೀತಿಸಿ ಅವರ ನೆನಪಲ್ಲಿ ಬದುಕು ಸವೆಸುವವರ ಕತೆಗಳಿವು, ಯೂ ಟ್ಯೂಬಿನಲ್ಲಿ ದೊರೆಯುತ್ತವೆ, ನೀವೂ ನೋಡಿ!

ಹೌದೇ ಪ್ರೀತಿ ಒಪ್ಪ ಓರಣ
ಅಲ್ಲವೇ ಪ್ರೀತಿ ವಿನಾ ಕಾರಣ

ಜಯಂತ್ ಕಾಯ್ಕಿಣಿ






Thursday, February 18, 2016

Simply

ಚೆಲುವ ಪ್ರತಿಮೆ ನೀನು...
ಪ್ರೇಮ ಲೋಕದಿಂದ ತಂದ ಪ್ರೇಮದ ಸಂದೇಶ...
ಆಹಾ, ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ...

ವಲೆಂಟೈನ್ಸ್ ಡೇಯ ರಾತ್ರಿ ಹೀಗೆಲ್ಲಾ ಹಾಡಿ ಕುಣಿರಬಹುದೇ ಈ ಕಣ್ಣು ಮೂಗು ಕಾಣದ ಹಾಗೆ ಬಣ್ಣ ಬಳಿದ ಬೊಂಬೆಗಳು? 

 ಹುಬ್ಬು, ರೋಮ, ಕೂದಲು, ಏನೂ ಇಲ್ಲದ ಈ ಬೊಂಬೆಗಳು ದಿನವಿಡೀ ಅಲುಗದೆ ನಿಂತು ರಾತ್ರಿಯೆಲ್ಲ ಮಾಲ್ ಪೂರ್ತಿ ಸುತ್ತಿರಬಹುದೇ?  ಲಿಫ್ಟ್, ಎಸ್ಕಲೇಟರ್ಗಳಲ್ಲಿ ಸುಮ್ಮಸುಮ್ಮನೆ ಮೇಲೆ ಕೆಳಗೆ ಓಡಾಡಿ ಗಾಜಿನಲ್ಲಿ ಬಂದಿಯಾದ ರಂಗ್ ಭಿ ರಂಗೀ ಡೊನಟ್, ಚಾಕಲೇಟ್, ಕುಕೀಸ್ ಗಳಿಗೆ ಆಸೆ ಮಾಡಿರಬಹುದೇ?  ಐನಾಕ್ಸಿನ ಸೀಟುಗಳಲ್ಲಿ ಕೂತು, ಎದ್ದು, ಖಾಲಿ ಸ್ಕ್ರೀನನ್ನು ನೋಡಿ, ನಕ್ಕಿರಬಹುದೇ?  ಮಾಲಿನ ರೂಫಿನ ಮೇಲಿಂದ ನೇತಾಡುವ ತೂಗು ದೀಪಗಳ ಬೆಳಕಲ್ಲಿ ಒಬ್ಬರನ್ನೊಬ್ಬರು ನೋಡಿ ಪ್ರೀತಿಸಿರಬಹುದೇ? ಲಿಫ್ಟಿನ ಸಂಗೀತಕ್ಕೆ, ಅದರ ಗೋಡೆಗಳಿಗೆ ಅಂಟಿರುವ ಕನ್ನಡಿಯಲ್ಲಿ ಕಾಣುವ ತಮ್ಮದೇ ಪ್ರತಿಬಿಂಬಕ್ಕೆ ಮಾರು ಹೋಗಿರಬಹುದೇ? ಬಟ್ಟೆ -ಬರೆ, ಇಲೆಕ್ಟ್ರೋನಿಕ್ಸ್, ಸೌಂದರ್ಯವರ್ಧಕಗಳು, ಪುಸ್ತಕಗಳು, ಆಟಿಕೆಗಳು, ಪರ್ಸ್, ಬ್ಯಾಗು ಇವೆಲ್ಲವನ್ನೂ ನೋಡಿ ಅಬ್ಬಾ! ಮನುಷ್ಯರಿಗೆ ಏನೆಲ್ಲಾ ಬೇಕಿದೆಯಲ್ಲ ಎಂದು ಆಶ್ಚರ್ಯ ಪಟ್ಟಿರಬಹುದೇ?